
ಡಾ. ನಾಗಲಕ್ಷ್ಮೀ ಚೌಧರಿ
ಬೆಂಗಳೂರು: ‘ಧರ್ಮಸ್ಥಳ ವ್ಯಾಪ್ತಿಯಲ್ಲಿ 20 ವರ್ಷಗಳಿಂದ ನಾಪತ್ತೆ ಆಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಅಲ್ಲಿ ನಡೆದ ಅಸ್ವಾಭಾವಿಕ ಸಾವು, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಮಗ್ರ ತನಿಖೆ ನಡೆಸುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆರೋಪಿಸಿದ್ದಾರೆ.
ಈ ಬಗ್ಗೆ ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, ‘ಎಸ್‌ಐಟಿ ತಂಡವು ಚಿನ್ನಯ್ಯ ಅವರ ಹೇಳಿಕೆ ಆಧರಿಸಿ ಮಾನವ ಕಳೇಬರಹಗಳ ಉತ್ಖನನಕ್ಕೆ ಸೀಮಿತವಾಗಿದ್ದು, ಆತನ ಹೇಳಿಕೆ ಮಿತಿಯೊಳಗೆ ತನಿಖೆ ನಡೆಸುತ್ತಿದೆ. ಇಲ್ಲಿ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು, ಅಸ್ವಾಭಾವಿಕ ಸಾವು, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಆಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಎಸ್ಐಟಿ ರಚನೆ ಆದಾಗಿನಿಂದಲೂ ಚಿನ್ನಯ್ಯ ಹೇಳಿಕೆಗೆ ತನಿಖೆ ಸೀಮಿತವಾಗಿದೆ. ಉತ್ಖನನದ ಸಂದರ್ಭದಲ್ಲಿ ದೊರೆತ ಅಸ್ಥಿ ಪಂಜರಗಳು ಹಾಗೂ ಸಾವು ಸಂಭವಿಸಿದ ಕಾರಣದ ಬಗ್ಗೆ ಮಾಹಿತಿ ದೊರೆತಿಲ್ಲ. ಇವುಗಳಲ್ಲಿ ಮಹಿಳೆಯರ ಅಸ್ಥಿ ಪಂಜರಗಳನ್ನು ಗುರುತಿಸುವ ಕೆಲಸವಾಗಿದೆಯೇ? ಕಾಡಿನಲ್ಲಿ ಅಸ್ಥಿಪಂಜರಗಳು ದೊರೆತಿದ್ದು, ಈ ಬಗ್ಗೆ ತನಿಖೆ ಏನಾದರೂ ಕೈಗೊಳ್ಳಲಾಗಿದೆಯೇ? ಕೈಗೊಂಡಿದ್ದರೆ ಈ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
‘ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಐಟಿ ಇದುವರೆಗೆ ಕೈಗೊಂಡ ತನಿಖೆಯ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.