ADVERTISEMENT

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್ಐಟಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 5:59 IST
Last Updated 23 ಆಗಸ್ಟ್ 2025, 5:59 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡವು ಬೆಳ್ತಂಗಡಿ ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಿತು.

ತಾನು ಹೂತಿಹಾಕಿದ್ದ ಮೃತದೇಹವೊಂದನ್ನು ಅಗೆದು ತೆಗೆದಿರುವುದಾಗಿ ಹೇಳಿದ್ದ, ಸಾಕ್ಷಿ ದೂರುದಾರ ಅದರದ್ದು ಎನ್ನಲಾದ ತಲೆಬುರುಡೆಯೊಂದನ್ನು ಹಾಜರುಪಡಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ಎಲ್ಲಿಂದ ಎಂಬ ಬಗ್ಗೆ ವಿಚಾರಣೆ ವೇಳೆ ಎಸ್ಐಟಿಗೆ ಮಹಿತಿ ನೀಡಲು ಮೀನಾಮೇಷ ಎಣಿಸಿದ್ದ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಶುಕ್ರವಾರ ತಡರಾತ್ರಿವರೆಗೂ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು.

'ನಾನು ತಂದೊಪ್ಪಿಸಿರುವ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ' ಎಂದು ಆತ ಅಧಿಕಾರಿಗಳ ಮುಂದೆ ಹೇಳಿದ್ದ. ಸುಳ್ಳು ಹೇಳಿರುವುದನ್ನು ಒಪ್ಪಿಕೊಂಡ ಬಳಿಕ ಎಸ್ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು. ಇಷ್ಟು ದಿನ ವಿಚಾರಣೆ ಬಳಿಕ ಆತನನ್ನು ವಕೀಲರ ತಂಡದ ಜೊತೆ ಬಿಟ್ಟು ಕಳುಹಿಸುತ್ತಿದ್ದ ಅಧಿಕಾರಿಗಳು ಶುಕ್ರವಾರ ಆತನನ್ನು ತಮ್ಮ ವಶದಲ್ಲೇ ಇರಿಸಿಕೊಂಡರು.

ADVERTISEMENT

ಶನಿವಾರ ಬೆಳೆಗ್ಗೆ ಆತನನದನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸಾಕ್ಷಿ ದೂರುದಾರ ಧೃಮಸ್ಥಳ ಗ್ರಾಮದಲ್ಲಿ ತೋರಿಸಿದ್ದ 18 ಜಾಗಗಳಲ್ಲಿ ಎಸ್ಐಟಿಯವರು 17 ಕಡೆ ನೆಲವನ್ನು ಅಗೆದು ಶೋಧ ನಡೆಸಿದ್ದರು. ಅವುಗಳಲ್ಲಿ ನೆಲ ಅಗೆದ ಒಂದು ಜಾಗದಲ್ಲಿ ಹಾಗೂ ಒಂದು ಕಡೆ ನೆಲದ ಮೇಲೆ ಮೃತದೇಹದ ಅವಶೇಷ ಪತ್ತೆಯಾಗಿತ್ತು. ಅವುಗಳನ್ನು ಎಸ್ಐಟಿಯವರು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.