ADVERTISEMENT

Dharmasthala Case: ಮತ್ತೊಂದು ಬುರುಡೆಯ ಕುರುಹು ಪತ್ತೆ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:52 IST
Last Updated 25 ಸೆಪ್ಟೆಂಬರ್ 2025, 23:52 IST
<div class="paragraphs"><p>ಧರ್ಮಸ್ಥಳ ಪ್ರಕರಣ</p></div>

ಧರ್ಮಸ್ಥಳ ಪ್ರಕರಣ

   

ಧರ್ಮಸ್ಥಳ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿರುವ ಮೃತದೇಹಗಳ ಅವಶೇಷವೊಂದರ ಬಳಿ ಚಾಲನಾ ಪರವಾನಗಿ ಪತ್ರವೂ ಸಿಕ್ಕಿದ್ದು, ಅದರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ದಾಸರ ಕಲ್ಲಹಳ್ಳಿ  ಆದಿಶೇಷ ನಾರಾಯಣ (27) ಅವರ ಹೆಸರು ಇತ್ತು. ಆದಿಶೇಷ ನಾರಾಯಣ ಕುಟುಂಬದವರನ್ನು ಬೆಳ್ತಂಗಡಿ ಕಚೇರಿಗೆ ಕರೆಸಿಕೊಂಡ ಎಸ್‌ಐಟಿ ಅಧಿಕಾರಿಗಳು, ಆ ವ್ಯಕ್ತಿಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ಎಸ್‌ಐಟಿ ಕಚೇರಿಗೆ ಹಾಜರಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆದಿಶೇಷ ನಾರಾಯಣ ಅವರ ಸೋದರಿ ಲಕ್ಷ್ಮೀ, ‘ಎಸ್‌ಐಟಿ ಅವರಿಗೆ ಸಿಕ್ಕಿದ ಡ್ರೈವಿಂಗ್‌ ಲೈಸೆನ್ಸ್‌ ನನ್ನ ಸೋದರನದೇ. ಆತನ ಬಟ್ಟೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಆತ ಬೆಂಗಳೂರಿನಲ್ಲಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ. 2013ರ ಅಕ್ಟೋಬರ್‌ ಬಳಿಕ ಮನೆಗೆ ಬಂದಿಲ್ಲ. ಆತ ಮರಳಬಹುದು ಎಂಬ ನಿರೀಕ್ಷೆಯಿಂದ ನಾವೂ  ದೂರು ನೀಡಿರಲಿಲ್ಲ’ ಎಂದರು. 

ADVERTISEMENT

‘ಈಚೆಗೆ ಎಸ್‌ಐಟಿ ಅವರು ಕರೆ ಮಾಡಿ  ಆತನ ವಿಳಾಸವಿರುವ ಚಾಲನಾ ಪರವಾನಗಿ ಪತ್ರ ಧರ್ಮಸ್ಥಳದಲ್ಲಿ ಸಿಕ್ಕಿದ ಬಗ್ಗೆ ಮಾಹಿತಿ ನೀಡಿದ್ದರು. ಹಾಗಾಗಿ ಇಂದು ಬಂದು ಅದನ್ನು ಗುರುತಿಸಿದ್ದೇವೆ’ ಎಂದರು.

‘ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿರುವ ಮೃತದೇಹದ ಅವಶೇಷ ಆದಿಶೇಷ ನಾರಾಯಣ ಅವರದೇ ಎಂಬುದು ಇನ್ನೂ ಖಚಿತವಾಗಿಲ್ಲ. ಡಿಎನ್‌ಎ ಪರೀಕ್ಷೆ ಬಳಿಕವಷ್ಟೇ ಅದನ್ನು ಖಚಿತಪಡಿಸಬಹುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ್ದ ಏಳು ತಲೆ ಬುರುಡೆಗಳಲ್ಲಿ ಒಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಯು.ಬಿ.ಅಯ್ಯಪ್ಪ ಅವರದು ಎಂಬ ಮಾಹಿತಿ ಈ ಹಿಂದೆಯೇ ಸಿಕ್ಕಿತ್ತು. ಅದನ್ನು ಡಿಎನ್‌ಎ ಪರೀಕ್ಷೆ ಮೂಲಕ ಇನ್ನಷ್ಟೇ ಖಾತರಿಪಡಿಸಿಕೊಳ್ಳಬೇಕಿದೆ. 

ಇನ್ನೊಂದು ದೂರು:

ಎಸ್‌ಐಟಿಗೆ ಗುರುವಾಯನಕೆರೆ ನಿವಾಸಿ ಶಶಿರಾಜ್‌ ಶೆಟ್ಟಿ ಎಂಬುವರು ಗುರುವಾರ ದೂರು ನೀಡಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸುಳ್ಳು ಹೇಳಿದ  ಕಾರಣಕ್ಕೆ ಸಾಕ್ಷಿದೂರುದಾರನ್ನನೇ ಎಸ್‌ಐಟಿ ಬಂಧಿಸಿದೆ. ಆ ಬಳಿಕವೂ ಕೆಲವರು, ಈ ಪ್ರಕರಣದಲ್ಲಿ ಸಾಕ್ಷಿಗಳಾಗುತ್ತೇವೆ ಎಂದು ಎಸ್‌ಐಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರನ್ನೂ  ಆರೋಪಿಗಳನ್ನಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳದ ಬಗ್ಗೆ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುವುದನ್ನು ತಡೆಯಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.