ಬೆಂಗಳೂರು: ‘ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಕ್ಷೇತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಗಿರೀಶ್ ಮಟ್ಟಣ್ಣನವರ್ ಟಿ.ಜಯಂತ್ ಹಾಗೂ ಎಂ.ಡಿ.ಸಮೀರ್ ಮತ್ತಿತರರ ಚಲನವಲನ ಚಟುವಟಿಕೆಗಳು ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
‘ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯ’ ಭಕ್ತರಾದ ಬೆಂಗಳೂರಿನ ತೇಜಸ್ ಎ. ಗೌಡ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ಆದಾಯ ತೆರಿಗೆಯ ಮಂಗಳೂರು ಕೇಂದ್ರ ವಲಯದ ಅಧಿಕಾರಿ ಜಾರಿ ನಿರ್ದೇಶನಾಲಯದ (ಇ.ಡಿ) ಮಂಗಳೂರು ಉಪ ವಲಯ ಕಚೇರಿಯ ನಿರ್ದೇಶಕ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು. ‘ಎಸ್‌ಐಟಿ ಹಾಗೂ ಇತರ ಸಕ್ಷಮ ಪ್ರಾಧಿಕಾರಗಳಿಗೆ ನಾವು ಸಲ್ಲಿಸಿರುವ ಮನವಿ ಮತ್ತು ದೂರುಗಳನ್ನು ಪರಿಗಣಿಸಲು ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.