ADVERTISEMENT

Dharmasthala Case | ಭಾವನಾತ್ಮಕ ಹೇಳಿಕೆ ಬೇಡ: ಸಚಿವರು, ಶಾಸಕರಿಗೆ ಸಿಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 18:59 IST
Last Updated 12 ಆಗಸ್ಟ್ 2025, 18:59 IST
   

ಬೆಂಗಳೂರು: ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತ ತನಿಖೆಗೆ ಎಸ್‌ಐಟಿ ರಚಿಸಿರುವ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ’ ಎಂದು ಸಚಿವರು, ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ನಗರದ ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯಿತು.

ಈ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಧರ್ಮಸ್ಥಳದಲ್ಲಿ 13 ಸ್ಥಳಗಳಲ್ಲಿ ಎಸ್ಐಟಿ ಶೋಧ ನಡೆಸಿದೆ. ಅದರಲ್ಲಿ ಒಂದು ಕಡೆ ಮಾತ್ರ ಮೂಳೆಗಳು ಸಿಕ್ಕಿವೆ. ಅದು ಕೂಡ ಮಹಿಳೆಯದ್ದಲ್ಲ, ಪುರುಷನದ್ದು. 13ನೇ ಪಾಯಿಂಟ್‌ನಲ್ಲೂ ಮೂಳೆಗಳು ಸಿಗದೇ ಹೋದರೆ ಎಸ್‌ಐಟಿ ನಡೆಸುತ್ತಿರುವ ಶೋಧವನ್ನು ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಯಾರೂ ಆತಂಕ ಪಡಬೇಡಿ ಎಂದು ಸಲಹೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

‘ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತ ಘಟನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಈ ಘಟನೆಯ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಘಟನೆಯಲ್ಲಿ ಮೊದಲ ಸಾವು ಸಂಭವಿಸಿದ ತಕ್ಷಣ ಅಧಿಕಾರಿಗಳು ನನಗೆ ಮಾಹಿತಿ ನೀಡಿಲ್ಲ. 5.30ರವರೆಗೆ ಸಾವುಗಳ ಸಂಖ್ಯೆಯ ಬಗ್ಗೆಯೂ ಖಚಿತವಾಗಿ ಮಾಹಿತಿ ನೀಡಿರಲಿಲ್ಲ. ಕಾನೂನು ಸಲಹೆಗಾರ ಪೊನ್ನಣ್ಣ ಕರೆ ಮಾಡುವವರೆಗೆ ಸಾವುಗಳ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲವೆಂದು ಹೇಳಿದ್ದಾರೆ. ವಿರೋಧ ಪಕ್ಷಗಳ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡುವಂತೆ ಶಾಸಕರಿಗೆ ಸಲಹೆ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ಉಸ್ತುವಾರಿ ಸಚಿವರು ಶಾಸಕರ ನಡುವೆ ಅಭಿಪ್ರಾಯ ವ್ಯತ್ಯಾಸ, ಸಮಸ್ಯೆಗಳನ್ನು ಬಗೆಹರಿಸಲು 2–3 ತಿಂಗಳಿಗೊಮ್ಮೆಯಾದರೂ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಬೇಕು’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಅನುದಾನ ಕೊರತೆ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯರು ಧ್ವನಿ ಎತ್ತಿದ್ದಾರೆ. ಶಾಸಕರಿಗೆ ಕೊಟ್ಟಂತೆ ತಮಗೂ ಹೆಚ್ಚುವರಿ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದೆಲ್ಲ ಈಗ ಆಗಲ್ಲ ಎಂದು ನೇರವಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದೂ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.