ADVERTISEMENT

ಧರ್ಮಸ್ಥಳದ ನಂದಾದೀಪ ನಂದಿತೆಂಬುದು ಸುಳ್ಳು ಸುದ್ದಿ: ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 8:58 IST
Last Updated 27 ಮಾರ್ಚ್ 2020, 8:58 IST
   

ಬೆಂಗಳೂರು: ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿನ ದೇವರ ನಂದಾದೀಪ ನಂದಿ ಹೋಗಿದೆ ಎಂಬ ಅಪಪ್ರಚಾರಗಳಿಗೆ, ವದಂತಿಗಳಿಗೆ ಯಾರೂ ಕಿವಿಗೊಡಬೇಕಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ಧರ್ಮಸ್ಥಳ, ತಿರುಪತಿ, ಶ್ರೀಶೈಲ ಸನ್ನಿಧಾನದ ನಂದಾದೀಪಗಳು ನಂದಿ ಹೋದವು ಎಂಬ ಗಾಳಿ ಸುದ್ದಿಗಳು ಗುರುವಾರ ರಾತ್ರಿಯಿಂದಲೇ ಚಿತ್ರದುರ್ಗ, ಬಳ್ಳಾರಿಗಳಲ್ಲಿ ಹರಿದಾಡಿದ್ದವು. ಹೀಗಾಗಿ ಮಹಿಳೆಯರು ತಮ್ಮ ಮನೆಗಳ ಎದುರು ದೀಪ ಬೆಳಗಿದ್ದರು. ಈ ಸುದ್ದಿ ಪ್ರಸಾರವಾಗುತ್ತಲೇ ಸ್ಪಷ್ಟನೆ ನೀಡಿರುವ ವೀರೇಂದ್ರ ಹೆಗ್ಗಡೆ ಅವರು, ಇವೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.

‘ಮಂಜುನಾಥ ದೇವಸ್ಥಾನದಲ್ಲಿ ರಾತ್ರಿ 8ಕ್ಕೆ ಬಾಗಿಲು ಹಾಕಲಾಗುತ್ತದೆ. ಮರುದಿನ ಮುಂಜಾನೆ 5ಕ್ಕೆ ಬಾಗಿಲನ್ನು ತೆರೆಯಲಾಗುತ್ತದೆ. ಮಧ್ಯದಲ್ಲಿ ದೇವಾಲಯಕ್ಕೆ ಯಾರಿಗೂ ಪ್ರವೇಶವಿಲ್ಲ. ಆ ನಂತರ ದೇವಾಲಯವನ್ನು ಪ್ರವೇಶಿಸಿದವರು ಯಾರು? ಅಲ್ಲಿ ನಂದಾದೀಪ ನಂದಿಹೋಗಿದೆ ಎಂಬುದಾಗಿ ನೋಡಿದವರು ಯಾರು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ‌

ADVERTISEMENT

‘ಕೊರೊನಾ ಮಹಾಮಾರಿಯನ್ನು ಮನುಜ ಕುಲದಿಂದ ದೂರ ಮಾಡಲು ಭಕ್ತರು ಅವರ ಮನೆಯ ಒಳಗಿದ್ದೇ ಪ್ರಾರ್ಥಿಸಬಹುದು,’ ಎಂದೂ ಅವರು ಹೇಳಿದ್ದಾರೆ‌. ಅಲ್ಲದೆ ಮಾಧ್ಯಮಗಳು ಯಾವುದೇ ಸುದ್ದಿ ಬಿತ್ತರಿಸುವುದಕ್ಕೂ ಮೊದಲು ತಮ್ಮನ್ನು ವಿಚಾರಿಸಬೇಕಾಗಿ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.