ADVERTISEMENT

ಧರ್ಮಸ್ಥಳ: ಲಕ್ಷದೀಪೋತ್ಸವ, ಅನ್ನದಾಸೋಹ, ಸಾಹಿತ್ಯ ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:46 IST
Last Updated 25 ನವೆಂಬರ್ 2019, 19:46 IST
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ನದಾಸೋಹದ ಒಂದು ನೋಟ
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅನ್ನದಾಸೋಹದ ಒಂದು ನೋಟ   

ಉಜಿರೆ: ಧರ್ಮಸ್ಥಳದಲ್ಲಿ ಅನ್ನಪೂರ್ಣ ಛತ್ರದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾಸೋಹ ವಿಖ್ಯಾತವಾಗಿದೆ. ಕಾರ್ತಿಕ ಮಾಸದ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆ ಹಾಗೂ ಸರ್ವಧರ್ಮ ಸಮ್ಮೇಳನ ಈ ಮೂರು ಕೂಡ ಸೋಮವಾರದಂದೇ ದಿನ ಇದ್ದುದರಿಂದ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಆಪ್ತರು ಹಾಗೂ ಅಭಿಮಾನಿಗಳು ಹೆಗ್ಗಡೆಯವರಿಗೆ ಫಲ-ಪುಷ್ಪ ಅರ್ಪಿಸಿ ಶ್ರದ್ಧಾ-ಭಕ್ತಿಯಿಂದ ಜನ್ಮ ದಿನದ ಶುಭಾಶಯ ಸಲ್ಲಿಸಿದರು.
ಅನ್ನಪೂರ್ಣ ಭೋಜನಾಲಯದಲ್ಲಿ 50 ಸಾವಿರಕ್ಕೂ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ.

ಇಂದು ಲಕ್ಷ ದೀಪೋತ್ಸವ: ಮಂಗಳವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯುತ್ತದೆ. ನಾಡಿನೆಲ್ಲೆಡೆಯಿಂದ 1 ಲಕ್ಷಕ್ಕೂ ಮಿಕ್ಕಿ ಭಕ್ತರು ಬರುತ್ತಾರೆ. ಅನೇಕರು ಪಾದಯಾತ್ರೆಯಲ್ಲಿ ಬರುತ್ತಾರೆ. ರೈತರು ತಮ್ಮ ಕೃಷಿ ಉತ್ಪನ್ನಗಳಾದ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

ADVERTISEMENT

ಲಕ್ಷ ದೀಪೋತ್ಸವದ ಸಂದರ್ಭ ಮಂಗಳವಾರ ರಾತ್ರಿ ಬೆಂಗಳೂರಿನ ಭಕ್ತರ 20 ತಂಡಗಳ 2 ಸಾವಿರ ಸ್ವಯಂ ಸೇವಕರು, 1 ಲಕ್ಷ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡುತ್ತಾರೆ. ಹತ್ತು ಸಾವಿರಕ್ಕೂ ಮಿಕ್ಕಿ ಕಲಾವಿದರು ಕೊಂಬು, ಕಹಳೆ, ವಾಲಗ, ಕೊಳಲು ವಾದನದೊಂದಿಗೆ ಕಲಾಸೇವೆ ಅರ್ಪಿಸುವರು.

ಇಂದು ಸಾಹಿತ್ಯ ಸಮ್ಮೇಳನ: ಮಂಗಳವಾರ ಸಂಜೆ 5 ಗಂಟೆಗೆ ಅಮೃತರ್ಷಿಣಿ ಸಭಾ ಭವನದಲ್ಲಿ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನವನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಉದ್ಘಾಟಿಸುವರು. ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು.
ಕುಮಟಾದ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ಬೆಂಗಳೂರಿನ ಖ್ಯಾತ ವಾಗ್ಮಿ ರಿಚರ್ಡ್‌ ಲೂಯಿಸ್ ಬದುಕಿನಲ್ಲಿ ಸಾಹಿತ್ಯದ ಮಹತ್ವದ ಬಗ್ಯೆ ಉಪನ್ಯಾಸ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.