ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಆರೋಪದ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಹಾಗೂ ನಟ ರಾಕೇಶ್ ಅಡಿಗ ಪ್ರತಿಕ್ರಿಸಿದ್ದು, ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರು ನಾಪತ್ತೆಯಾದ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ. ಧರ್ಮಸ್ಥಳ ಅನೇಕ ಮಂದಿಗೆ ಆರಾಧನೆಯ ಸ್ಥಳವಾಗಿದೆ. ರಾಜ್ಯದ ಜನ ಈ ಪೂಜ್ಯ ಸ್ಥಳವನ್ನು ಹೆಚ್ಚು ಗೌರವಿಸುತ್ತಾರೆ.ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ನಾನು ಆಶಿಸುತ್ತೇನೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು' ಎಂದು ಬರೆದುಕೊಂಡಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣದ ಸಂಬಂಧ ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ನಟ ಪ್ರಕಾಶ್ ರಾಜ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ.
ನಮ್ಮ ಸರ್ಕಾರಕ್ಕೆ, ನಾನು ಬೇಡಿಕೊಳ್ಳುತ್ತೇನೆ, ನಿಮ್ಮ ಜನರ ನಿಟ್ಟುಸಿರಿಗೆ ಎದುರಾಗಿ, ಅವರ ಅಳಲನ್ನು ಆಲಿಸಿ. ತನಿಖೆ ನಡೆಸುವುದು, ಸತ್ಯವನ್ನು ಹೊರಹಾಕುವುದು ಮತ್ತು ನ್ಯಾಯವನ್ನು ಖಚಿತಪಡಿಸುವುದು ನಿಮ್ಮ ಪವಿತ್ರ ಕರ್ತವ್ಯ. ಇನ್ನು ವಿಳಂಬ, ನೆಪಗಳು ಬೇಡ ಎಂದು ನಟ ರಾಕೇಶ್ ಅಡಿಗ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ಕಳೆದ ದಶಕಗಳಲ್ಲಿ ನಡೆದ ‘ಅಸಹಜ ಸಾವುಗಳು’ ಎಂಬ ಹಣೆಪಟ್ಟಿ ಹೊತ್ತ ಪ್ರಕರಣಗಳ ಬಗ್ಗೆ ಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಈ ಪ್ರಕರಣಗಳ ಕುರಿತು ದೂರುದಾರನ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ ಎಂದು ಹೇಳಿದ್ದಾರೆ.
‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಆರೋಪ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಪೊಲೀಸ್ ಇಲಾಖೆಯವರು ಹೇಳಿದರೆ ಮಾಡುತ್ತೇವೆ. ಈ ಕುರಿತು ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಯಾರೇ ಒತ್ತಡ ಹಾಕಿದರೂ, ಯಾರ ಮಾತೂ ಕೇಳುವುದಿಲ್ಲ. ಕಾನೂನು ಪಾಲಿಸುತ್ತೇವೆ’ ಎಂದು ಹೇಳಿದ್ದಾರೆ.
‘ತನಿಖೆಗೆ ಎಸ್‌ಐಟಿ ರಚಿಸಬೇಕೆಂಬ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ ಹೇಳಿಕೆ ಕುರಿತು, ‘ನಾವು ಪರವೂ ಇಲ್ಲ, ವಿರೋಧವೂ ಇಲ್ಲ. ಇಲಾಖೆಯವರ ವರದಿ ಆಧರಿಸಿ ಎಸ್‌ಐಟಿ ರಚಿಸುತ್ತೇವೆ. ಶನಿವಾರದೊಳಗೆ ಎಲ್ಲವೂ ಗೊತ್ತಾಗಲಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.