ADVERTISEMENT

ಧರ್ಮಸ್ಥಳ ಪ್ರಕರಣ | ವರದಿ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ: ಮಹಿಳಾ ಆಯೋಗದ ಅಧ್ಯಕ್ಷೆ

ಮುಖ್ಯ ಕಾರ್ಯದರ್ಶಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 15:32 IST
Last Updated 13 ಜನವರಿ 2026, 15:32 IST
ನಾಗಲಕ್ಷ್ಮೀ ಚೌಧರಿ
ನಾಗಲಕ್ಷ್ಮೀ ಚೌಧರಿ   

ಬೆಂಗಳೂರು: ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳೆಯರ ಅಸಹಜ ಸಾವು ಹಾಗೂ ನಾಪತ್ತೆ ಪ್ರಕರಣಗಳ ತನಿಖೆಯ ವರದಿಯನ್ನು ತಮಗೆ ಸಲ್ಲಿಸುವಂತೆ ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಖ್ಯಸ್ಥರಿಗೆ ನಿರ್ದೇಶನ ನೀಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣಗಳ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿ 2025ರ ಜುಲೈ 14ರಂದು ಆಯೋಗ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿತ್ತು. ಸರ್ಕಾರವು ಎಸ್‌ಐಟಿ ರಚಿಸಿತ್ತು. ಎಸ್‌ಐಟಿ ವ್ಯಾಪ್ತಿಯಲ್ಲಿ ದಾಖಲಾಗುವ ಎಲ್ಲ ಪ್ರಕರಣ ತನಿಖೆ ನಡೆಸಬೇಕು ಎಂದು ಸರ್ಕಾರವು ಸೂಚಿಸಿದ್ದರೂ ಎಸ್‌ಐಟಿ ಸಾಕ್ಷಿ ದೂರುದಾರರ ಹೇಳಿಕೆ ಆಧರಿಸಿದ ತನಿಖೆಗಷ್ಟೇ ಸೀಮಿತವಾದಂತಿದೆ. ಆತನ ಹೇಳಿಕೆಯ ಮಿತಿಯಲ್ಲೇ ಉತ್ಖನನ ಮತ್ತು ತನಿಖೆ ನಡೆಸಿದಂತಿದೆ. ಮಹಿಳೆಯರ ಅಸಹಜ ಸಾವು, ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳ ತನಿಖೆ ನಡೆಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳಾ ಆಯೋಗಕ್ಕೆ ಸಿವಿಲ್‌ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಇದ್ದು, ಈ ತನಿಖೆಯ ವರದಿಯನ್ನು ತರಿಸಿಕೊಳ್ಳಬಹುದಾಗಿದೆ. ಈವರೆಗೆ ನಡೆಸಿರುವ ತನಿಖೆಯ ವರದಿಯನ್ನು ಸಲ್ಲಿಸಿ ಎಂದು ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ, ಯಾವುದೇ ಉತ್ತರ ಬಂದಿರುವುದಿಲ್ಲ. ಈ ವಿಚಾರದಲ್ಲಿ ತಾವು ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ADVERTISEMENT

‘ಅವಾಚ್ಯ ಅಶ್ಲೀಲ ಪದಬಳಕೆ ನಿಯಂತ್ರಿಸಿ’

‘ಮನರಂಜನಾ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಮತ್ತು ಅಶ್ಲೀಲ ಪದ ಬಳಕೆಯ ಹಾಡುಗಳನ್ನು ಹರಿಯ ಬಿಡಲಾಗುತ್ತಿದೆ. ಇದರಿಂದ ತಮಗೆ ಮುಜುಗರವಾಗುತ್ತಿದೆ ಎಂದು ಅನೇಕ ಮಹಿಳೆಯರು ಮತ್ತು ಯುವತಿಯರು ದೂರು ನೀಡಿದ್ದಾರೆ.

ಹಾಡುಗಾರಿಕೆಯಲ್ಲಿ ಅವಾಚ್ಯ ಅಶ್ಲೀಲ ಪದ ಬಳಕೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ’ ಎಂದು ಮಹಿಳಾ ಆಯೋಗವು ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ. ‘ಇಂತಹ ಪದ ಬಳಸಿ ಹಾಡುವವರು ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕು. ಈ ಸಂಬಂಧ ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಆಯೋಗವು ತನ್ನ ಪತ್ರದಲ್ಲಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.