ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತ ಎಸ್‌ಐಟಿ ತನಿಖೆ ವಿಚಾರ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿ. ಸುನಿಲ್ ಕುಮಾರ್, ‘ಎಸ್‌ಐಟಿಯಿಂದ ಮಧ್ಯಂತರ ವರದಿ ಪಡೆದು ಸದನಕ್ಕೆ ಮಂಡಿಸಬೇಕು’ ಎಂದು ಆಗ್ರಹಿಸಿದರು. ಅದಕ್ಕೆ, ಗೃಹ ಸಚಿವ ಜಿ. ಪರಮೇಶ್ವರ, ‘ಎಸ್‌ಐಟಿ ವರದಿ ನೀಡಿದ ಬಳಿಕವಷ್ಟೇ ಮಾಹಿತಿ ಹಂಚಿಕೊಳ್ಳಲು ಸಾಧ್ಯ’ ಎಂದು ಸಮಜಾಯಿಷಿ ನೀಡಿದರು.
‘ಧರ್ಮಸ್ಥಳದ ವಿಚಾರದಲ್ಲಿ ಸತ್ಯಾಂಶ ಹೊರಬರಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ತನಿಖೆ ನೆಪದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅವಹೇಳನ ಮಾಡುವ ಪ್ರಕ್ರಿಯೆ ಕೆಲವು ದಿನಗಳಿಂದ ನಡೆಯುತ್ತಿದೆ. ಇಡೀ ಧರ್ಮಸ್ಥಳವನ್ನು ಗುರಿ ಮಾಡುವ ಪ್ರವೃತ್ತಿ ಬೆಳೆದಿರುವುದು ಕಾಣುತ್ತಿದೆ. ನಮ್ಮೆಲ್ಲರ ಶ್ರದ್ಧೆ, ನಂಬಿಕೆ ಮೇಲೆ ಆಘಾತ ಉಂಟುಮಾಡಿದೆ’ ಎಂದು ಸುನಿಲ್ ಕುಮಾರ್ ಹೇಳಿದರು.
‘ಅನಾಮಿಕ ವ್ಯಕ್ತಿ ಕೆಲವು ಸ್ಥಳ ತೋರಿಸಿ, ಬಳಿಕ ಹಲವು ಸ್ಥಳಗಳನ್ನು ಗುರುತಿಸಿದ್ದಾನೆ. ಈವರೆಗೆ ಹಲವು ಕಡೆ ಗುಂಡಿ ತೋಡಿದರೂ ಏನೂ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅನಾಮಿಕ ಹೇಳಿದ ಕಾರಣಕ್ಕೆ ಎಷ್ಟು ಗುಂಡಿ ತೋಡಿ ಶೋಧಿಸಲು ಸಾಧ್ಯ. ಹೀಗಾಗಿ ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆಯಬೇಕು. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಆಗಬೇಕು. ಧರ್ಮಸ್ಥಳದ ಪಾವಿತ್ರ್ಯ ಕಾಪಾಡಲು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.
ಆಗ ಪರಮೇಶ್ವರ, ‘ತನಿಖೆ ಎಂಬ ಕಾರಣಕ್ಕೆ ನೂರಾರು ಗುಂಡಿ ತೋಡಿ ಪರಿಶೀಲಿಸಲು ಸಾಧ್ಯವಿಲ್ಲ. ತನಿಖೆಗೆ ಕಾಲಮಿತಿಯೂ ಇರಲಿದೆ. ತನಿಖೆ ಒಂದು ಹಂತಕ್ಕೆ ತಲುಪಿದ ಮೇಲೆ ಎಸ್‌ಐಟಿ ವರದಿ ನೀಡಲಿದೆ. ಆ ನಂತರವಷ್ಟೇ ಮಾಹಿತಿ ನೀಡಲಾಗುವುದು’ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು.
ಮತ್ತೆ ಸುನಿಲ್ ಕುಮಾರ್, ‘ಮತ್ತೊಬ್ಬರು ತಲೆಬುರುಡೆ ತಂದು ಬೇರೆ ಕಡೆ ಗುಂಡಿ ತೋಡಿ ಎಂದರೆ ಏನು ಮಾಡುತ್ತೀರಿ? ವಾರದ ಬಳಿಕ ಆತ (ಅನಾಮಿಕ ವ್ಯಕ್ತಿ) ಹುಚ್ಚ ಎಂದು ಹೇಳಿ ತನಿಖೆ ಮುಗಿಯಿತು ಎಂದುಬಿಟ್ಟರೆ. ಅಲ್ಲಿಯವರೆಗೆ ಆದ ತೇಜೋವಧೆ ಕತೆ ಏನು? ಹೀಗಾಗಿ ಮಧ್ಯಂತರ ವರದಿ ಪಡೆದು ಮಾಹಿತಿ ನೀಡಬೇಕು’ ಎಂದು ಪುನರುಚ್ಚರಿಸಿದರು.
‘ಎಸ್‌ಐಟಿ ವರದಿ ಸಲ್ಲಿಸುವವರೆಗೆ ಚರ್ಚೆ ಸಾಧ್ಯವಿಲ್ಲ’ ಎಂದು ಪರಮೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.