ADVERTISEMENT

ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಗರಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 0:26 IST
Last Updated 27 ಸೆಪ್ಟೆಂಬರ್ 2023, 0:26 IST
   

ಧಾರವಾಡ: ರಾಷ್ಟ್ರಧ್ವಜ ತಯಾರಿಸುವ ಗರಗ ಕ್ಷೇತ್ರೀಯ ಸೇವಾ ಸಂಘವನ್ನು 2023ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 5 ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದೆ. ಮಹಾತ್ಮ ಗಾಂಧಿ ಜನ್ಮದಿನ ಅ.2 ರಂದು ಸಂಜೆ 4.30 ಕ್ಕೆ ಬೆಂಗಳೂರಿನ ವಾರ್ತಾ ಸೌಧದ ಸುಲೋಚನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡುವರು.

ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಸಂಘಕ್ಕೆ ಇದೆ.

ADVERTISEMENT

ಈ ಸಂಘವು ಧಾರವಾಡದಿಂದ 17 ಕಿ.ಮಿ.ದೂರದ ಗರಗ ಗ್ರಾಮದಲ್ಲಿದೆ. 1956 ರಲ್ಲಿ ಧಾರವಾಡ ತಾಲೂಕು ಸೇವಾ ಸಂಘವೆಂದು ಆರಂಭವಾಗಿ ‌ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟದಲ್ಲಿ ತೊಡಗಿದೆ.

ಸಂಪೂರ್ಣ ರಾಷ್ಟ್ರಧ್ವಜ ತಯಾರಿಸುವ ಪರವಾನಿಗೆಯನ್ನು ಈಚೆಗೆ ಸಂಘವು ಪಡೆದಿದೆ.

ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಜೂನ್‌ 3 ರಂದು ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜೊತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳುತ್ತಿದೆ.

ಗರಗ ಕ್ಷೇತ್ರೀಯ ಸಂಘವು ರಾಷ್ಟ್ರಧ್ವಜದ ಬಟ್ಟೆ ನೇಯ್ಗೆ ಕಾರ್ಯವನ್ನು 1975 ರಿಂದ ನಿರ್ವಹಿಸುತ್ತಿದೆ. ಪ್ರಸ್ತುತ 10 ಹಳ್ಳಿಗಳಲ್ಲಿ ಈ ಘಟಕದ ನೂಲುವ ಕೇಂದ್ರಗಳಿವೆ. ನೇಯುವ ಕೇಂದ್ರಗಳಿರುವುದು ಗರಗ ಮತ್ತು ತಡಕೋಡದಲ್ಲಿ ಮಾತ್ರ. ಗರಗದಲ್ಲಿ 70 ಮಗ್ಗದ ಜೊತೆ 75 ಚರಕಗಳು ಇವೆ. ತಡಕೋಡದಲ್ಲಿ 30 ಮಗ್ಗಗಳ ಜೊತೆ 60 ಚರಕಗಳು ಇವೆ. ದೇಶದ ಎಲ್ಲ ರಾಜ್ಯಗಳಿಗೆ ಐಎಸ್‌ಐ ಗುರುತಿನ ಧ್ವಜಗಳನ್ನು ಸಂಸ್ಥೆ ಪೂರೈಸುತ್ತಿದೆ. ಸಂಸ್ಥೆಯಲ್ಲಿ ಸದ್ಯಕ್ಕೆ 250 ಮಂದಿ ನೂಲುವವರು, 50 ನೇಕಾರರು ಅಲ್ಲದೆ 15 ಕಾಯಂ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.