ಬೆಂಗಳೂರು: ‘ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದಾರೆ’ ಎಂದು ಆರೋಪಿಸಿ ಆಂತರಿಕಾ ಭದ್ರತಾ ದಳದ (ಐಎಸ್‌ಡಿ) ಐಜಿಪಿ ಡಿ. ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಐಎಸ್‌ಡಿ ಡಿಐಜಿ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ.
‘ಐಜಿಪಿ ರೂಪಾ ಅವರ ಆದೇಶದಂತೆ, 2024ರ ಸೆಪ್ಟೆಂಬರ್ 6ರಂದು ಹೆಡ್‌ಕಾನ್‌ಸ್ಟೇಬಲ್ ಟಿ.ಎಸ್.ಮಂಜುನಾಥ್, ಗೃಹರಕ್ಷಕ ದಳದ ಸಿಬ್ಬಂದಿ ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಯನ್ನು ತೆಗೆದುಕೊಂಡು ಬಂದು, ನನ್ನ ಅನುಮತಿ ಇಲ್ಲದೆ, ಕಚೇರಿಯ ಬಾಗಿಲು ತೆರೆದಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ್ ಕೆಲವೊಂದು ಕಡತಗಳನ್ನು ನನ್ನ ಕಚೇರಿಯಲ್ಲಿ ಇರಿಸಿ, ಕಚೇರಿಯ ಫೋಟೋಗಳನ್ನು ತೆಗೆದು ಐಜಿಪಿ ರೂಪಾ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಅದಕ್ಕೂ ಮೊದಲು ನನ್ನ ಆಪ್ತ ಸಹಾಯಕ ಕಿರಣ್ ಕುಮಾರ್ ಅವರು ಮಂಜುನಾಥ್ ಅವರಿಗೆ ಡಿಐಜಿ ಅವರ ಅನುಮತಿ ಇಲ್ಲದೆ ಕಚೇರಿ ಬಾಗಿಲು ತೆರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದರೂ ಕಡತಗಳನ್ನು ಇರಿಸಿ ಫೋಟೊ ಕಳುಹಿಸಿದ್ದಾರೆ’ ಎಂದು ವರ್ತಿಕಾ ದೂರಿನಲ್ಲಿ ಆರೋಪಿಸಿದ್ದಾರೆ.
‘ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಕಚೇರಿ ಆಪ್ತ ಸಹಾಯಕ ಕಿರಣ್ ಕುಮಾರ್, ಮಂಜುನಾಥ್, ಮಲ್ಲಿಕಾರ್ಜುನ್ ಅವರನ್ನು ಕರೆದು ವಿಚಾರಿಸಿದಾಗ, ಡಿ.ರೂಪಾ ಅವರ ಸೂಚನೆ ಮೇರೆಗೆ ಕಚೇರಿ ಬಾಗಿಲು ತೆರೆದು, ಕಡತ ಇರಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಮತ್ತು ಐಎಸ್‌ಡಿ ಡಿಜಿಪಿಗೂ ವರ್ತಿಕಾ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.