ADVERTISEMENT

ಶುಶ್ರೂಷಕರ ನೋಂದಣಿಗೆ ‘ವಿಶೇಷ ಡಿಜಿ ಲಾಕರ್‌’: ಸಚಿವ ಶರಣಪ್ರಕಾಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 15:31 IST
Last Updated 14 ಜುಲೈ 2025, 15:31 IST
ಸಚಿವ ಶರಣಪ್ರಕಾಶ ಪಾಟೀಲ
ಸಚಿವ ಶರಣಪ್ರಕಾಶ ಪಾಟೀಲ   

'Special Digi Locker' for registration of nurses

ಬೆಂಗಳೂರು: ‘ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೋಂದಣಿಗೆ ‘ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ’ವನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ಹೇಳಿದ್ದಾರೆ.

ಯುಐಡಿಎಐ, ಸಿ-ಇಜಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್‌ ಅಭಿವೃದ್ಧಿಪಡಿಸಿರುವ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನದ ಮೂಲಕ ಆಧಾರ್‌, ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಜುಲೈ 15ರಿಂದ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಆಧಾರ್‌ ಇ-ಕೆವೈಸಿಯಿಂದ ಶುಶ್ರೂಷಕರ ವೈಯಕ್ತಿಕ ದತ್ತಾಂಶ, ವಿಳಾಸ, ಭಾವಚಿತ್ರ ಹಾಗೂ ಇತರೆ ಮಾಹಿತಿಗಳನ್ನು ನೇರವಾಗಿ ಕರ್ನಾಟಕ ಶುಶ್ರೂಷಾ ಪರಿಷತ್‌ ಪಡೆದುಕೊಳ್ಳಲಿದೆ. ರಾಜ್ಯ ಮತ್ತು ಹೊರ ರಾಜ್ಯದ ಶುಶ್ರೂಷಕರ ಸಮೂಹ ನೋಂದಣಿ ಮಾಡಿಸಿಕೊಳ್ಳಲು ಬೆಂಗಳೂರಿಗೆ ಕೇಂದ್ರ ಕಚೇರಿಗೆ ಬರುತ್ತಿದ್ದಾರೆ. ಊಟ, ವಸತಿಗಾಗಿ ಸಾವಿರಾರು ರೂಪಾಯಿ ವ್ಯಯಿಸಿ ಪರದಾಡುತ್ತಿದ್ದಾರೆ. ಹಿಂದಿನ ಪದ್ಧತಿಯಿಂದ ಮಹಿಳೆಯರು, ಗರ್ಭಿಣಿಯರು, ತಾಯಂದಿರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗಿದೆ ಎಂದಿದ್ದಾರೆ.

ಡಿಜಿ ಲಾಕರ್‌ ತಂತ್ರಜ್ಞಾನದಿಂದ ಶುಶ್ರೂಷಕರ ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,  ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಗಳ ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್‌ ಪಡೆದುಕೊಳ್ಳಲಿದೆ. ಡಿಜಿ ಲಾಕರ್‌ ತಂತ್ರಜ್ಞಾನದ ಮೂಲಕವೇ ಶುಶ್ರೂಷಕರಿಗೆ ನೋಂದಣಿ ಪತ್ರವನ್ನು ವಿತರಿಸಬಹುದಾಗಿದೆ ಎಂದು ಶುಶ್ರೂಷಾ ಪರಿಷತ್ತಿನ ಕುಲಸಚಿವ ಡಾ.ಕೆ.ಮಲ್ಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.