ADVERTISEMENT

ಬಗರ್‌ಹುಕುಂಗೆ ಡಿಜಿಟಲ್‌ ಸಾಗುವಳಿ ಚೀಟಿ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 15:34 IST
Last Updated 6 ಡಿಸೆಂಬರ್ 2024, 15:34 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಬೆಂಗಳೂರು: ಬಗರ್‌ಹುಕುಂ ಮಂಜೂರಾತಿ ಪಡೆದ ರೈತರಿಗೆ ಡಿಜಿಟಲ್‌ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ದಾಖಲೆಗಳನ್ನು ಕಳೆದುಕೊಳ್ಳುವ, ಕಚೇರಿಗಳಿಗೆ ಅಲೆದಾಡುವ ತಾಪತ್ರಯ ತಪ್ಪಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಗುಂಡ್ಲುಪೇಟೆ ತಾಲ್ಲೂಕು, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿಯ ರೈತ ನಂಜುಂಡಯ್ಯ ಹುಚ್ಚಯ್ಯ ಅವರಿಗೆ ಮೊದಲ ಡಿಜಿಟಲ್‌ ಸಾಗುವಳಿ ಚೀಟಿ ವಿತರಿಸಲಾಗಿದೆ. ಸಾಗುವಳಿ ಮಂಜೂರಾತಿ ನೀಡುವ ಎಲ್ಲ ರೈತರಿಗೂ ಡಿಜಿಟಲ್‌ ಸಾಗುವಳಿ ಪತ್ರ ದೊರಕಲಿದೆ ಎಂದರು.

ADVERTISEMENT

ನಮೂನೆ 1ರಿಂದ 5 ಹಾಗೂ 6ರಿಂದ 10 ಅನ್ನು ಸರಳೀಕರಣಗೊಳಿಸಲಾಗಿದೆ. ಕಳೆದ ಕೆಲ ದಶಕಗಳಿಂದ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೈತರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ನಾನಾ ಕಾರಣಗಳಿಂದಾಗಿ ರೈತರಿಗೆ ಸೂಕ್ತ ದಾಖಲೆಗಳನ್ನು ನೀಡಲಾಗಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುತ್ತಿದ್ದರು. ಇನ್ನುಮುಂದೆ ಅಂತಹ ಸಮಸ್ಯೆ ಇರುವುದಿಲ್ಲ. ಜಮೀನಿಗೆ ಹಕ್ಕುಪತ್ರ ನೀಡುವ ಜತೆಗೆ, ತಹಶೀಲ್ದಾರ್‌ ಅವರೇ ನೋಂದಣಿ ಮಾಡಿಕೊಡುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಗರ್ ಹುಕುಂ ಯೋಜನೆಯ ಅಡಿ ಸಲ್ಲಿಕೆಯಾದ ಅರ್ಜಿಗಳಲ್ಲಿ 1.26 ಲಕ್ಷ ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. ಮೊದಲ ಹಂತದಲ್ಲಿ ಡಿಸೆಂಬರ್‌ನಲ್ಲೇ ಐದು ಸಾವಿರ ಜನರಿಗೆ ಡಿಜಿಟಲ್‌ ಸಾಗುವಳಿ ಪತ್ರ ನೀಡಲಾಗುವುದು. ಜನವರಿ ವೇಳೆಗೆ 20ಸಾವಿರ ರೈತರಿಗೆ ನೀಡಲಾಗುವುದು. ಆರು ತಿಂಗಳಲ್ಲಿ ಎಲ್ಲರಿಗೂ ಸಾಗುವಳಿ ಚೀಟಿ ನೀಡಲು ಕ್ರಮವಹಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.