ADVERTISEMENT

ದ್ವಿತೀಯ ಪಿಯು ಮರು ಮೌಲ್ಯಮಾಪನ: ದೀಕ್ಷಾ, ಪ್ರತೀಕ್ಷಾ ರಾಜ್ಯಕ್ಕೇ ಪ್ರಥಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 15:57 IST
Last Updated 25 ಏಪ್ರಿಲ್ 2025, 15:57 IST
ಆರ್. ದೀಕ್ಷಾ
ಆರ್. ದೀಕ್ಷಾ   

ಬೆಂಗಳೂರು: ದ್ವಿತೀಯ ಪಿಯು ಮರು ಮೌಲ್ಯಮಾಪನದ ನಂತರ ಫಲಿತಾಂಶದಲ್ಲಿ ಹಲವು ಬದಲಾವಣೆಗಳಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ಆರ್‌. ದೀಕ್ಷಾ ಒಬ್ಬರೇ ಪ್ರಥಮ (600/600) ಸ್ಥಾನಕ್ಕೇರಿದ್ದಾರೆ.

ಇದೇ ತಿಂಗಳ ಮೊದಲ ವಾರ ಫಲಿತಾಂಶ ಪ್ರಕಟವಾದಾಗ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಅಮೂಲ್ಯ ಕಾಮತ್ ಹಾಗೂ ಆರ್‌. ದೀಕ್ಷಾ ಅವರು ತಲಾ 599 ಅಂಕ ಗಳಿಸಿ ಮೊದಲ ಸ್ಥಾನ ಹಂಚಿಕೊಂಡಿದ್ದರು. ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆದಿದ್ದ ದೀಕ್ಷಾಗೆ ರಸಾಯನ ವಿಜ್ಞಾನ ವಿಷಯದಲ್ಲಿ 99 ಬಂದಿದ್ದವು. ಅದಕ್ಕಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ರಸಾಯನ ವಿಜ್ಞಾನದಲ್ಲೂ 100ಕ್ಕೆ 100 ಅಂಕ ಲಭಿಸಿದ್ದು, ಒಬ್ಬರೇ ಮೊದಲ ಸ್ಥಾನ ಪಡೆದಿದ್ದಾರೆ. ಅಮೂಲ್ಯ ಕಾಮತ್‌ಗೆ ದ್ವಿತೀಯ ಸ್ಥಾನ ದೊರೆತಿದೆ.

ವಾಣಿಜ್ಯ ವಿಭಾಗದಲ್ಲಿ ಪ್ರತೀಕ್ಷಾ ಮೊದಲು: 

ಬೆಂಗಳೂರಿನ ರಾಜಾಜಿನಗರದ ಎಎಸ್‌ಸಿ ಕಾಲೇಜಿನ ವಿದ್ಯಾರ್ಥಿನಿ ಪಿ. ಪ್ರತೀಕ್ಷಾ 599 ಅಂಕ ಪಡೆಯುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಮಂಗಳೂರು ಕೆನರಾ ಕಾಲೇಜಿನ ಎಸ್‌. ದೀಪಶ್ರೀ (599) ಜತೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. 

ADVERTISEMENT

ಈ ಹಿಂದೆ ಪ್ರತೀಕ್ಷಾ 597 ಅಂಕ ಗಳಿಸಿ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದರು. ಇಂಗ್ಲಿಷ್ ವಿಷಯದ ಮರು ಮೌಲ್ಯಮಾಪನದ ನಂತರ ಎರಡು ಅಂಕಗಳು ಹೆಚ್ಚುವರಿಯಾಗಿ ಲಭಿಸಿವೆ.

ಹೆಬ್ಬಾಳ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೆ. ಅಮೃತಾ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಕೆ.ಮಂಜುನಾಥ ಹೆಬ್ಬಾರ್ ಮತ್ತು ಕೆ. ವಿ. ಪೂರ್ಣಾಂಬಾರವರ ಪುತ್ರಿ.

ಪಿ. ಪ್ರತೀಕ್ಷಾ
ಕೆ. ಅಮೃತಾ
ಮರು ಮೌಲ್ಯಮಾಪನದ ನಂತರ 600 ಅಂಕ ಬಂದದ್ದು ಖುಷಿಯಾಗಿದೆ. ರಸಾಯನ ವಿಜ್ಞಾನದಲ್ಲಿ ಪ್ರಶ್ನೆಯೊಂದಕ್ಕೆ ಐದು ಅಂಕಗಳ ಬದಲು ನಾಲ್ಕು ಅಂಕ ಕೊಟ್ಟಿದ್ದರು. ಈಗ ಆ ಒಂದು ಅಂಕವೂ ಸಿಕ್ಕಿದೆ 
ಆರ್. ದೀಕ್ಷಾ ವಾಗ್ದೇವಿ ಕಾಲೇಜು ವಿದ್ಯಾರ್ಥಿನಿ
ಪರೀಕ್ಷೆ ಮುಗಿದಾಗಲೇ ಮೊದಲ ಸ್ಥಾನದ ನಿರೀಕ್ಷೆಯಲ್ಲಿದ್ದೆ. ಫಲಿತಾಂಶದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಬಂದಿತ್ತು. ಮರು ಮೌಲ್ಯಮಾಪನದ ನಂತರ ಪ್ರತಿಭೆಗೆ ತಕ್ಕ ಫಲ ಸಿಕ್ಕಿದೆ ‌
ಪಿ. ಪ್ರತೀಕ್ಷಾ ಎಎಸ್‌ಸಿ ಕಾಲೇಜು ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.