ADVERTISEMENT

ಮತ್ತೆ ಶಾಸಕರ ರಾಜೀನಾಮೆ ಸದ್ದು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:00 IST
Last Updated 23 ಏಪ್ರಿಲ್ 2019, 20:00 IST
   

ಬೆಂಗಳೂರು: ಬಂಡಾಯವೆದ್ದು ಬಿಜೆಪಿ ಬಾಗಿಲಲ್ಲಿ ನಿಂತಿರುವ ಅತೃಪ್ತ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ, ಸೂಕ್ತ ಸಮಯದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

ಆ ಬೆನ್ನಲ್ಲೆ, ರಮೇಶ ಅವರನ್ನು ಮನವೊಲಿಸಲು ‘ಮೈತ್ರಿ’ಕೂಟದ ನಾಯಕರು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವವರೆಗೆ (ಮೇ 23) ರಮೇಶ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ಕಾಂಗ್ರೆಸ್‌ ನಿರ್ಧರಿಸಿದೆ.

ಗೋಕಾಕದಲ್ಲಿ ಮಂಗಳವಾರ ಮಾತನಾಡಿದ ರಮೇಶ ಜಾರಕಿಹೊಳಿ, ‘ನಾನಿನ್ನೂ ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಯಾವಾಗ ರಾಜೀನಾಮೆ ನೀಡಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಬಹಿರಂಗಪಡಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ರಮೇಶ ಇವತ್ತೊಂದು ಹೇಳಿಕೆ, ನಾಳೆ ಮತ್ತೊಂದು ಹೇಳಿಕೆ ಕೊಡುತ್ತಾರೆ. ವೈಯಕ್ತಿಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರು. ಅವರನ್ನು ಭೇಟಿ ಮಾಡಲು ನಾವು ಸಾಕಷ್ಟು ಬಾರಿ ಪ್ರಯತ್ನಿಸಿದೆವು. ಆದರೆ, ಭೇಟಿ ಸಾಧ್ಯವಾಗಿಲ್ಲ’ ಎಂದು ತಿಳಿಸಿದರು.

‘ರಮೇಶ ವಿರುದ್ಧ ಕ್ರಮದ ಬಗ್ಗೆ ತಕ್ಷಣ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಫಲಿತಾಂಶ ಬಂದ ಬಳಿಕ ಈ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.

ಬಿಜೆಪಿಯ ‘ಆಪರೇಷನ್ ಕಮಲ’ ಬಗ್ಗೆ ಮಾತನಾಡಿದ ದಿನೇಶ್‌, ‘ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಬಿಜೆಪಿಯವರ ತಂತ್ರ ಅವರಿಗೇ ಮುಳುವಾಗಲಿದೆ’ ಎಂದರು.

‘ರಮೇಶಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಹೊಣೆ ಎಲ್ಲವನ್ನೂ ಪಕ್ಷ ನೀಡಿತ್ತು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಕಾರಣ
ವೇನೆಂದು ಸ್ಪಷ್ಟವಾಗಿಲ್ಲ’ ಎಂದು ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.‌

‘ಸರ್ಕಾರ ಬಿದ್ದು ಹೋಗುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ. ನಾವು ಬೀಳುವುದೂ ಇಲ್ಲ, ನೀವು ಬೀಳಿಸುವುದಕ್ಕೂ ಆಗುವುದಿಲ್ಲ’ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬಿಜೆಪಿಯಿಂದ ಸಂಚು: ‘ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಸಂಚು ನಡೆಸುತ್ತಲೇ ಇದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ತೋಳ ಬಂತು ತೋಳ ಕತೆ

‘ರಮೇಶ ಅವರು ಮತದಾನದ ದಿನ ಇಂತಹ ಹೇಳಿಕೆ ನೀಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ಯಾವ ಉದ್ದೇಶಕ್ಕಾಗಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇವತ್ತು ರಾಜೀನಾಮೆ ಕೊಡ್ತೇನಿ, ನಾಳೆ ಕೊಡ್ತೇನಿ ಅಂತಿದ್ದಾರೆ. ಕಳೆದ 6 ತಿಂಗಳಿನಿಂದ ಹೇಳಿಕೆ ನೀಡುತ್ತಿದ್ದಾರೆ. ತೋಳ ಬಂತು ತೋಳ ಎನ್ನುವ ಹಾಗೆ ಮಾಡುತ್ತಿದ್ದಾರೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟಾಂಗ್‌ ನೀಡಿದ್ದಾರೆ.

‘ಅವರು ರಾಜೀನಾಮೆ ನೀಡಿದರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ’ ಎಂದೂ ಅವರು ಹೇಳಿದರು.

***

ನಾನು ಮತ್ತು ಕಾಂಗ್ರೆಸ್ ಮುಖಂಡರು ರಮೇಶ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ.

-ಕುಮಾರಸ್ವಾಮಿ

***

ರಮೇಶ ಯಾವ ಕಾರಣಕ್ಕೆ ರಾಜೀನಾಮೆ ಬಗ್ಗೆ ಹೇಳಿದ್ದಾರೊ ಗೊತ್ತಿಲ್ಲ. ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್‌ ಜೊತೆ ನಾನೂ ಅವರ ಮನವೊಲಿಸುತ್ತೇನೆ.

–ಪರಮೇಶ್ವರ್‌

***

ಸದ್ಯದಲ್ಲಿಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ಖಚಿತ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾನು ಡಿಸಿಎಂ ಆಗಲ್ಲ, ಆಗುವುದಾದರೆ ಮುಖ್ಯಮಂತ್ರಿಯೇ ಆಗುತ್ತೇನೆ.

ಶಾಸಕ ಉಮೇಶ್‌ ಕತ್ತಿ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.