ADVERTISEMENT

ಅಶ್ರಫ್ ಹತ್ಯೆ: ದುಷ್ಟ ಶಕ್ತಿಗಳ ಕೃತ್ಯ ಎಂದ ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:38 IST
Last Updated 30 ಏಪ್ರಿಲ್ 2025, 15:38 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ‘ಮಂಗಳೂರಿನ ಹೊರವಲಯದ ಕುಡುಪು ಬಳಿ ಅಶ್ರಫ್‌ ಎಂಬ ಯುವಕನ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟ ಶಕ್ತಿಗಳ ಕೃತ್ಯ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಸಾಮರಸ್ಯ ಮತ್ತು ಭಾವೈಕ್ಯತೆಯ ನೆಲೆಯಾಗಿತ್ತು. ಆದರೆ, ಕೆಲ ಸಮಾಜ ಘಾತುಕ ಶಕ್ತಿಗಳು ಹಲವು ವರ್ಷಗಳಿಂದ ಜಿಲ್ಲೆಯ ಕೋಮು ಸೌಹಾರ್ದಕ್ಕೆ ಕೊಳ್ಳಿ ಇಡುವ ಪ್ರಯತ್ನ ಮಾಡುತ್ತಿವೆ. ಕುಡುಪು ಘಟನೆ ಇದರ ಒಂದು ಭಾಗ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಯುವಕನ ಕೊಲೆ ಸಂಬಂಧ ಈಗಾಗಲೇ ಮಂಗಳೂರು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ 15 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಚಿತ’ ಎಂದು ದಿನೇಶ್‌ ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಸೌಹಾರ್ದತೆ ಕಾಪಾಡುವುದು ಪೊಲೀಸರ ಜವಾಬ್ದಾರಿ. ಈ ಘಟನೆಯ ಬಳಿಕ ಕೆಲ ಸಮಾಜ ಘಾತುಕ ಶಕ್ತಿಗಳು ದ್ವೇಷ ಹರಡುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ. ಅದಕ್ಕೆ ಪೊಲೀಸರು ಅವಕಾಶ ಕೊಡಬಾರದು ಎಂದಿದ್ದಾರೆ.

‘ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿದೆ. ದಕ್ಷಿಣ ಕನ್ನಡದ ಜನ ಈ ಹುನ್ನಾರಗಳನ್ನು ಅರಿಯಬೇಕು. ಪ್ರಜ್ಞಾವಂತರ ಜಿಲ್ಲೆ ಎಂದೇ ಹೆಸರಾದ ದಕ್ಷಿಣ ಕನ್ನಡಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.