ADVERTISEMENT

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ವಿಚಾರಣೆಗೆ ಗೈರಾದ ದೂರುದಾರ ದಿನೇಶ್ ಕಲ್ಲಹಳ್ಳಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 19:32 IST
Last Updated 4 ಮಾರ್ಚ್ 2021, 19:32 IST
   

ಬೆಂಗಳೂರು: ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ವಿಚಾರಣೆಗೆ ಗುರುವಾರ ಗೈರಾದ ದೂರುದಾರ ದಿನೇಶ್ ಕಲ್ಲಹಳ್ಳಿ, ಭದ್ರತೆ ಕಾರಣ ನೀಡಿ ಕಬ್ಬನ್‌ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದಿದ್ದಾರೆ.

ಮಾರ್ಚ್ 2ರಂದು ಠಾಣೆಗೆ ಬಂದು ದೂರು ನೀಡಿದ್ದ ದಿನೇಶ್, ‘ರಮೇಶ ಜಾರಕಿಹೊಳಿ ಕೆಲಸದ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ದೌರ್ಜನ್ಯ ಎಸಗಿದ್ದಾರೆ. ಯುವತಿ ಹಾಗೂ ಆಕೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿದ್ದರು.

ದೂರು ಸ್ವೀಕರಿಸಿದ್ದ ಪೊಲೀಸರು, ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುವುದಕ್ಕಾಗಿ ದಿನೇಶ್ ಅವರಿಗೆ ನೋಟಿಸ್‌ ನೀಡಿದ್ದರು. ಅದಕ್ಕೆ ಪತ್ರದ ಮೂಲಕ ಉತ್ತರ ನೀಡಿರುವ ದಿನೇಶ್, ‘ನಾನು ವಿಚಾರಣೆಗೆ ಗೈರಾಗುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಮಾ. 2ರಂದೇ ದೂರು ನೀಡಿದ್ದೇನೆ. ಅದರ ಹೆಚ್ಚಿನ ವಿಚಾರಣೆಗೆ ಠಾಣೆಗೆ ಬರುವಂತೆ ನೋಟಿಸ್‌ ನೀಡಿದ್ದೀರಾ. ಆದರೆ, ನನಗೆ ಈಗ ಹಲವರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ಈಗಾಗಲೇ ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇನೆ. ನನಗೆ ಸೂಕ್ತ ಭದ್ರತೆ ಇಲ್ಲದ ಕಾರಣದಿಂದಾಗಿ ಗುರುವಾರ ವಿಚಾರಣೆಗೆ ಬರಲು ಆಗುವುದಿಲ್ಲ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ನನಗೆ ಸೂಕ್ತ ಭದ್ರತೆ ನೀಡಿದರೆ, ಮಾ. 9ರಂದು ತಮ್ಮ ಎದುರು ವಿಚಾರಣೆಗೆ ಹಾಜರಾಗುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ.

ಸಿ.ಡಿ ಮೂಲ ಪತ್ತೆಗೆ ತನಿಖೆ

ದಿನೇಶ್ ಅವರಿಗೆ ಸಿ.ಡಿ ಕೊಟ್ಟವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಯುವತಿ ಸಂಬಂಧಿ ಎನ್ನಲಾದ ವ್ಯಕ್ತಿಯೊಬ್ಬರು, ಮೆಜೆಸ್ಟಿಕ್‌ ಬಳಿಯ ರಾಮಕೃಷ್ಣ ಹೋಟೆಲ್‌ನಲ್ಲಿ ದಿನೇಶ್ ಅವರನ್ನು ಭೇಟಿಯಾಗಿದ್ದರು. ‘ಯುವತಿ ಪರ ಹೋರಾಟ ಮಾಡಿ. ಅವರಿಗೆ ನ್ಯಾಯ ಕೊಡಿಸಿ’ ಎಂದು ಅವರೇ ಸಿ.ಡಿ ಕೊಟ್ಟಿದ್ದರು ಎಂಬ ಮಾಹಿತಿ ಸಿಕ್ಕಿದೆ. ಹೋಟೆಲ್‌ನಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್ ಪಡೆದು, ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಿನೇಶ್ ಅವರ ದೂರಿನಲ್ಲಿ ಸ್ಪಷ್ಟತೆ ಇಲ್ಲ. ಯುವತಿ ವಿಳಾಸ ಹಾಗೂ ಆಕೆ ಯಾರು ಎಂಬುದನ್ನೂ ತಿಳಿಸಿಲ್ಲ. ಹೀಗಾಗಿ, ಯುವತಿ ಪತ್ತೆಯೂ ಕಷ್ಟವಾಗುತ್ತಿದೆ. ಯುವತಿಗಾಗಿ ಬೆಂಗಳೂರು, ಹೊರ ನಗರಗಳಲ್ಲೂ ಹುಡುಕಾಟ ನಡೆಸಲಾಗುತ್ತಿದೆ. ವಿಡಿಯೊದಲ್ಲಿರುವ ಭಾಷೆ ಗಮನಿಸಿದರೆ ಯುವತಿಯದ್ದು ಕಲಬುರ್ಗಿ ಇರಬಹುದೆಂಬ ಅನುಮಾನವಿದೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.