
ಬೆಂಗಳೂರು: ‘ಆರ್‌ಎಸ್‌ಎಸ್‌ನಲ್ಲಿ ಕಪಟತನವಿದೆ. ದೇಶ ಕಟ್ಟಲು ಬಂದಿದ್ದೇವೆ ಎನ್ನುತ್ತಾರೆ. ದೇಶಕ್ಕಾಗಿ ಯಾವ ತ್ಯಾಗ ಮಾಡಿದ್ದಾರೆ ಹೇಳಲಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
‘ಇವರು ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ದೇಶದ ಜನರ ಮಧ್ಯೆ ಜಗಳ ತಂದಿಡುತ್ತಿದ್ದಾರೆ’ ಎಂದು ಅವರು ಸೋಮವಾರ ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
‘ಮಹಾತ್ಮ ಗಾಂಧಿಯನ್ನು ಕೊಂದವರು ಯಾರು ? ಯಾವ ಹಿನ್ನೆಲೆಯಿಂದ ಬಂದವರು ನೆನಪು ಮಾಡಿಕೊಳ್ಳಲಿ. ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ. ಆದರೂ ಅದಕ್ಕೆ ಕೇಂದ್ರ ಕಚೇರಿ ಇದೆ. ಕಾರ್ಯಕರ್ತರು, ಪದಾಧಿಕಾರಿಗಳೂ ಇದ್ದಾರೆ. ಬಿಜೆಪಿ ನಾಯಕರೂ ಸಂಘದ ಕಾರ್ಯಕರ್ತರು ಎನ್ನುತ್ತಾರೆ. ಸಣ್ಣ–ಪುಟ್ಟ ಸಂಘ–ಸಂಸ್ಥೆಗಳೇ ನೋಂದಣಿ ಆಗುತ್ತವೆ. ಆದರೆ ಆರ್‌ಎಸ್ಎಸ್ ನೋಂದಣಿ ಆಗುವುದಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.
‘ಆರ್‌ಎಸ್‌ಎಸ್‌ಗೆ ಆಸ್ತಿ ಇದೆ ಎನ್ನುತ್ತಾರೆ. ಸಾರ್ವಜನಿಕರು, ಕಾರ್ಯಕರ್ತರು ದೇಣಿಗೆ ನೀಡುತ್ತಾರೆ ಎಂದು ಹೇಳುತ್ತಾರೆ. ಯಾರು ಎಷ್ಟು ಕೊಟ್ಟರು, ಏನು ಕೊಟ್ಟರು ಲೆಕ್ಕ ಬೇಕಲ್ಲ. ಶಾಲೆಗಳು, ವಿಶ್ವವಿದ್ಯಾಲಯ ಮಾಡಿದ್ದೇವೆ ಎನ್ನುತ್ತಾರೆ. ಅಷ್ಟೊಂದು ದೇಣಿಗೆ ಕೊಟ್ಟವರು ಯಾರು? ನೋಂದಣಿಯೇ ಆಗದ ಸಂಸ್ಥೆಗೆ ಇಷ್ಟೊಂದು ದೇಣಿಗೆ ಬರುತ್ತದಾ? ಬರಲಿ; ನಮಗೆ ಅಸೂಯೆ ಇಲ್ಲ. ಆದರೆ ಅದಕ್ಕೊಂದು ಲೆಕ್ಕ ಬೇಕಲ್ಲ. ಅದನ್ನು ಪ್ರಶ್ನಿಸಿದರೆ ದೇಶ ದ್ರೋಹಿಗಳು ಎನ್ನುತ್ತಾರೆ’ ಎಂದು ಕಿಡಿಕಾರಿದರು.
‘ಆರ್‌ಎಸ್‌ಎಸ್‌ಗೂ ಹಿಂದೂಗಳಿಗೂ ಏನು ಸಂಬಂಧ? ನಾನು ಆರ್‌ಎಸ್‌ಎಸ್ ಅಲ್ಲ. ಆದರೆ ನಾನೊಬ್ಬ ಹಿಂದೂ. ಸಮಾಜದಲ್ಲಿ ಆರ್‌ಎಸ್ಎಸ್‌ನವರು ಮಾತ್ರ ಹಿಂದೂಗಳು, ದೇಶ ಪ್ರೇಮಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಇದ್ದರೆ ಮಾತ್ರ ಹಿಂದೂಗಳಾ? ಇದ್ಯಾವ ನೀತಿ’ ಎಂದು ಪ್ರಶ್ನಿಸಿದರು.
ಮೋಹನ್ ಭಾಗವತ್ ಅವರು ಗೋಲ್ವಾಲ್ಕರ್ ಬಗ್ಗೆ ಮಾತನಾಡಬೇಕಿತ್ತು. ಅವರ ಬಗ್ಗೆ ಮಾತನಾಡದೆ ರವೀಂದ್ರನಾಥ್ ಟ್ಯಾಗೂರ್, ನೇತಾಜಿ, ಸರ್ದಾರ್ ಪಟೇಲ್ ಅವರುಗಳ ಬಗ್ಗೆ ಮಾತನಾಡಿದ್ದಾರೆ. ಅವರೆಲ್ಲರಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ ಎಂದೂ ದಿನೇಶ್ ಪ್ರಶ್ನಿಸಿದರು.