ADVERTISEMENT

ವಿಶ್ವಕರ್ಮರಲ್ಲಿ ಒಡಕು ಮೂಡಿಸಿಲ್ಲ: ಸಚಿವ ಕೋಟ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 19:52 IST
Last Updated 28 ಜೂನ್ 2022, 19:52 IST
ಕಲಾವಿದೆ ನಿಶಿತಾ ಸುದರ್ಶನ್‌ ಆಚಾರ್ಯ ಅವರು ಗ್ಲಾಸ್‌ ಪೇಂಟಿಂಗ್‌ ಮೂಲಕ ರಚಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರ ಭಾವಚಿತ್ರವನ್ನು ಮಂಗಳೂರಿನಲ್ಲಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸಚಿವರಿಗೆ ಮಂಗಳವಾರ ನೀಡಿದರು. –ಪ್ರಜಾವಾಣಿ ಚಿತ್ರ
ಕಲಾವಿದೆ ನಿಶಿತಾ ಸುದರ್ಶನ್‌ ಆಚಾರ್ಯ ಅವರು ಗ್ಲಾಸ್‌ ಪೇಂಟಿಂಗ್‌ ಮೂಲಕ ರಚಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರ ಭಾವಚಿತ್ರವನ್ನು ಮಂಗಳೂರಿನಲ್ಲಿ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸಚಿವರಿಗೆ ಮಂಗಳವಾರ ನೀಡಿದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ‘ವಿಶ್ವಕರ್ಮ ಸಮಾಜದ ಮುಖಂಡರ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ’ ಎಂದು ಆ ಸಮಾಜದ ಪ್ರಮುಖರು ಮಾಡಿರುವ ಆರೋಪವನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಲ್ಲಗಳೆದಿದ್ದಾರೆ.

ಈ ಆರೋಪಕ್ಕೆ ಇಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಸಚಿವರು, ‘ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ನೀಡಿದ ಮನವಿಯನ್ನು ನಾನು ಇತ್ತೀಚೆಗೆ ಸ್ವೀಕರಿಸಿದ್ದೇನೆಯೇ ಹೊರತು, ಆ ಸಮುದಾಯದಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಂಜುಂಡಿ ಅವರಿಗೆ ಅವಮಾನ ಆಗಿದೆ ಎಂದು ಸಮಾಜದ ಕೆಲವರು ಆರೋಪ ಮಾಡಿದ್ದಾರೆ. ಇದರಲ್ಲಿ ಹುರುಳಿಲ್ಲ. ಹರದನಹಳ್ಳಿಯ ಸ್ವಾಮೀಜಿ ಜೊತೆ ಸಮಾಜದ ಎಂಟು ಸ್ವಾಮೀಜಿಗಳು ಮನವಿ ನೀಡಲು ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಇತ್ತೀಚೆಗೆ ಬಂದಿದ್ದರು. ಅವರ ಜೊತೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್‌ ಅವರೂ ಇದ್ದರು. ಅದು ನಾನು ಕರೆದ ಸಭೆ ಅಲ್ಲ. ಅವರೇ ಸಮಸ್ಯೆ ಹೇಳಿಕೊಂಡು ಮನವಿ ‌ನೀಡಿದ್ದನ್ನು ಸ್ವೀಕರಿಸಿದ್ದೇನೆ. ನಾನೇ ಸಭೆ ಕರೆಯುತ್ತಿದ್ದರೆ ವಿಶ್ವಕರ್ಮ ಸಮಾಜದ ಮುಖಂಡರೂ ಆಗಿರುವ ಕೆ.ಪಿ. ನಂಜುಂಡಿ ಅವರನ್ನೂ ಆಹ್ವಾನಿಸುತ್ತಿದ್ದೆ’ ಎಂದರು.

ADVERTISEMENT

‘ಯಾವುದೇ ಸಮುದಾಯದ ಮುಖಂಡರು ತಮ್ಮ ಭಾವನೆ ಹೇಳಿಕೊಂಡರೆ, ಮನವಿ ಕೊಟ್ಟರೆ ಗೌರವದಿಂದ ‌ಸ್ವೀಕರಿಸುವುದು ನನ್ನ ಧರ್ಮ. ಮುಖ್ಯಮಂತ್ರಿ ಜೊತೆ ಮಾತನಾಡಿ ಸರ್ಕಾರದಿಂದ ಆದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದೇನೆ. ನಂಜುಂಡಿ ಜೊತೆ ಮಾತನಾಡಿ ವಿಶ್ವಕರ್ಮ ಸಮಾಜದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ವಿನಾಕಾರಣ ಯಾರೂ ಗೊಂದಲ ಸೃಷ್ಟಿಸಬಾರದು’ ಎಂದು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.