ADVERTISEMENT

ವಿಶ್ವವಿದ್ಯಾಲಯಗಳ ಸ್ವಾಯತ್ತೆ ಹರಣಕ್ಕೆ ಯತ್ನ: ಶಿಕ್ಷಣ ವಲಯದಲ್ಲಿ ಭಾರಿ ಆಕ್ರೋಶ

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಪ್ರಸ್ತಾವಕ್ಕೆ ಶಿಕ್ಷಣ ವಲಯದಲ್ಲಿ ಭಾರಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ   

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ನೇರ ನೇಮಕಾತಿಗೆ ಕಡಿವಾಣ ಹಾಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ ಮಾಡಿಸುವ ಸರ್ಕಾರದ ಪ್ರಯತ್ನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಮೂಲಕ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಇದರಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಭಂಗ ಬರುತ್ತದೆಎಂಬ ಆಕ್ರೋಶ ಶಿಕ್ಷಣ ವಲಯದಲ್ಲಿ ವ್ಯಕ್ತವಾಗಿದೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿಗಳ ಬಗ್ಗೆಉನ್ನತ ಶಿಕ್ಷಣ ಸಚಿವರಿಗೆ ಹೆಚ್ಚಿನ ಅರಿವು ಇಲ್ಲ. ಆದರೆ, ಯಾರೋ ಕೆಲವರು ಹಾದಿ ತಪ್ಪಿಸುವ ವಿಚಾರವನ್ನುಸಚಿವರ ತಲೆಗೆ ತುಂಬಿರುವ ಸಾಧ್ಯತೆ ಇದೆ. ನೇಮಕಾತಿಗಳನ್ನು ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ನಡೆಸಬೇಕು. ಇದರಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಲು ಸಾಧ್ಯವಿಲ್ಲ. ಯುಜಿಸಿ ಕಾಯ್ದೆಗೆ ಪರ್ಯಾಯ ಕಾಯ್ದೆಯನ್ನು ಇವರು ಹೇಗೆ ರೂಪಿಸುತ್ತಾರೆ’ ಎಂದು ಹೆಸರು ಹೇಳಲು ಬಯಸದ ಕುಲಪತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನೇಮಕಾತಿಗಳಿಗೆ ಸಂಬಂಧಿಸಿದಂತೆ ಮೆರಿಟ್‌ ಲಿಸ್ಟ್‌ ತಾನೇ ಸಿದ್ಧಪಡಿಸಿಕೊಡುವುದಾಗಿ ಸರ್ಕಾರ ಹೇಳಿದೆ. ಮೆರಿಟ್‌ ಲಿಸ್ಟ್‌ ಇವರು ಹೇಗೆ ತಯಾರು ಮಾಡಲು ಸಾಧ್ಯ. ಇದನ್ನು ತಯಾರು ಮಾಡಲು ಯಾವ ತಜ್ಞರು ಇರುತ್ತಾರೆ. ಇವರು ಸಿದ್ಧಪಡಿಸಿಕೊಡುವ ಪಟ್ಟಿಯ ಪ್ರಕಾರವೇ ನೇಮಕಾತಿ ಮಾಡಿಕೊಳ್ಳಬೇಕಿದ್ದರೆ, ವಿಶ್ವವಿದ್ಯಾಲಯಗಳಾದರೂ ಏತಕ್ಕೆ ಇರಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

‘ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಕೆಪಿಎಸ್‌ಸಿಯೂ ಸೇರಿದಂತೆ ರಾಜ್ಯ ಸರ್ಕಾರದಲ್ಲಿ ನಡೆಯುವ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಿಲ್ಲವೇ, ಅದಕ್ಕಾಗಿ ಸಾಕಷ್ಟು ಸಲ ನ್ಯಾಯಾಲಯಗಳಲ್ಲಿ ಸರ್ಕಾರ ಛೀಮಾರಿ ಹಾಕಿಸಿಕೊಂಡಿಲ್ಲವೆ. ಒಂದು ವೇಳೆ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದರೆ, ಆ ಬಗ್ಗೆ ತನಿಖೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದೇ ಇದೆ. ತಪ್ಪಿಸ್ಥರನ್ನು ಶಿಕ್ಷೆಗೆ ಗುರಿಪಡಿಸಲಿ’ ಎಂಬುದು ಅವರ ಅಭಿಪ್ರಾಯ.

‘ಸರ್ಕಾರದ ಈ ಪ್ರಯತ್ನದಿಂದ ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಕಳೆದುಕೊಳ್ಳುತ್ತವೆ, ವಿಶ್ವವಿದ್ಯಾಲಯಗಳು ಸರ್ಕಾರದ ಒಂದು ಇಲಾಖೆಯಾಗಿ ಮಾರ್ಪಡುತ್ತವೆ ಮತ್ತು ಕಂಪನಿಗಳ ಸಿಇಒ ಮಾದರಿಯಲ್ಲಿ ಕುಲಪತಿಗಳನ್ನು ನೇಮಕ ಮಾಡುತ್ತವೆ. ಸರ್ಕಾರಕ್ಕೆ ನೇಮಕಾತಿ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಬಯಕೆ ಇದ್ದರೆ, ಮೊದಲು ಸಾರ್ವಜನಿಕ ಚರ್ಚೆಗೆ ಮುಂದಾಗಬೇಕು. ಈ ಬದಲಾವಣೆಗೆ ತನ್ನ ಮುಂದಿರುವ ಕಾರ್ಯಯೋಜನೆಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಮತ್ತೊಂದು ವಿಶ್ವವಿದ್ಯಾಲಯ ಕುಲಪತಿ ತಿಳಿಸಿದ್ದಾರೆ.

‘ನೇಮಕಾತಿ ಅಧಿಕಾರ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳಬೇಕಿದ್ದರೆ, ಈಗ ಇರುವ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಇದಕ್ಕಾಗಿವಿಧಾನಮಂಡಲದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ, ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಕಳಿಸಬೇಕು. ರಾಜ್ಯಪಾಲರು ಅಂಕಿತ ಹಾಕಿದರಷ್ಟೇ ಕಾಯ್ದೆಯಾಗುತ್ತದೆ’ ಎಂದರು.

ಯುಜಿಸಿ ಕಾಯ್ದೆ ಏನು ಹೇಳುತ್ತದೆ
ಕೇಂದ್ರ ಕಾಯ್ದೆ, ರಾಜ್ಯ ಕಾಯ್ದೆಯಡಿ ಸ್ಥಾಪಿಸಲ್ಪಟ್ಟ ಮತ್ತು ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಯುಜಿಸಿ ಕಾಯ್ದೆಯ ಅನ್ವಯ ನಿಗದಿ ಮಾಡಿದ ಮಾನದಂಡಗಳ ಅನುಸಾರವೇ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಬೇಕು. ಇದನ್ನು ಮೀರಿದರೆ ಅನುದಾನ ನೀಡಿಕೆ ನಿಲ್ಲಿಸಲಾಗುವುದು.

**

ಈಗಿರುವ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಸರಿಪಡಿಸಬೇಕು, ಯಾರಾದರೂ ತಪ್ಪುಮಾಡಿದ್ದರೆ ಶಿಕ್ಷಿಸಬೇಕು. ಹೊಸ ವ್ಯವಸ್ಥೆ ತರುವ ಮೊದಲು ಸಮಗ್ರ ಚರ್ಚೆ ಆಗಬೇಕು
- ಟಿ.ಡಿ.ಕೆಂಪರಾಜು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ

**

ನೇಮಕಾತಿ ವಿಷಯ ಯುಜಿಸಿ ವ್ಯಾಪ್ತಿಗೆ ಬರುತ್ತದೆ. ನೇಮಕಾತಿಯ ನಿಯಮಾವಳಿ ಬದಲಿಸುವ ಮುನ್ನ ಶಿಕ್ಷಣ ತಜ್ಞರ ಮಧ್ಯೆ ಚರ್ಚೆ ಆಗಬೇಕು
- ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ

**

ವಿ.ವಿಗಳ ಸ್ವಾಯತ್ತೆಕಡಿಮೆ ಆಗುತ್ತದೆ. ವಿ.ವಿ ಗಳಿಗೆ ಉತ್ತಮ ಶಿಕ್ಷಕರು ಬೇಕು. ಯುಜಿಸಿ ನಿಯಮಾವಳಿ ಪ್ರಕಾರವೇ ಸರ್ಕಾರ ನೇಮಿಸಿದರೂ ತೊಂದರೆ ಇಲ್ಲ
- ಈಶ್ವರ ಪಿ, ಮಂಗಳೂರು ವಿಶ್ವವಿದ್ಯಾಲಯ, ಕುಲಪತಿ(ಪ್ರಭಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.