ADVERTISEMENT

ಸಿ.ಡಿ ಪ್ರಕರಣ: ಯುವತಿ ಪತ್ರಕ್ಕೆ ಸ್ಪಂದಿಸಲು ಎಸ್‌ಐಟಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 31 ಮೇ 2021, 20:07 IST
Last Updated 31 ಮೇ 2021, 20:07 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧದ ಸಿ.ಡಿಗೆ ಸಂಬಂಧಿಸಿ, ವಿಡಿಯೊದಲ್ಲಿದ್ದಾರೆ ಎನ್ನಲಾಗಿರುವ ಯುವತಿ ಬರೆದಿರುವ ಪತ್ರದಲ್ಲಿನ ಆರೋಪಗಳಿಗೆ ಸ್ಪಂದಿಸುವಂತೆ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ವಿವಾದಾತ್ಮಕ ಸಿ.ಡಿ ಕುರಿತು ಸಲ್ಲಿಕೆಯಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಮೂರು ಎಫ್‌ಐಆರ್‌ಗಳ ಕುರಿತು ಎಸಿಪಿ ಸಹಿ ಮಾಡಿ ಸಲ್ಲಿಸಿರುವ ಮೂರು ವರದಿಗಳನ್ನು ಪರಿಶೀಲನೆ ನಡೆಸಿತು.

‘ಮಗಳನ್ನು ಅಪಹರಿಸಲಾಗಿದೆ ಎಂದು ಯುವತಿಯ ಪೋಷಕರು ಆರ್‌.ಟಿ.ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಎಫ್‌ಐಆರ್‌ ಸಂಬಂಧ ಬಿ. ವರದಿ ಸಲ್ಲಿಸಿ ಮುಕ್ತಾಯಗೊಳಿಸಲಾಗಿದೆ. ಕಬ್ಬನ್ ಪಾರ್ಕ್ ಠಾಣೆ ಮತ್ತು ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ತನಿಖೆ ಮುಂದುವರಿದಿದೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ಮಾಹಿತಿ ನೀಡಿದರು.

ADVERTISEMENT

ತನಿಖಾ ವರದಿ ಪರಿಶೀಲಿಸಿದ ಪೀಠ, ಎಸ್‌ಐಟಿ ಮುಖ್ಯಸ್ಥರು ಸಹಿ ಮಾಡಬೇಕು ಎಂದು ಸೂಚಿಸಿತು. ‘ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ವೈದ್ಯಕೀಯ ರಜೆಯಲ್ಲಿರುವ ಕಾರಣ ತನಿಖಾಧಿಕಾರಿ ಸಹಿ ಮಾಡಿ ವರದಿ ಸಲ್ಲಿಸಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.

‘ಈ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾಯಾಲಯ ಮಾಡುತ್ತಿರುವ ಕಾರಣ ಎಸ್‌ಐಟಿ ಮುಖ್ಯಸ್ಥರು ಅಥವಾ ಆ ಹುದ್ದೆಯ ಉಸ್ತುವಾರಿ ಅಧಿಕಾರಿ ಅನುಮೋದನೆ ಪಡೆದು ವರದಿ ಸಲ್ಲಿಸಬೇಕು’ ಎಂದು ಪೀಠ ಸೂಚಿಸಿತು.

ಯುವತಿ ಬರೆದಿರುವ ಪತ್ರವು ರಿಜಿಸ್ಟ್ರಾರ್(ನ್ಯಾಯಾಂಗ) ಅವರಿಗೆ ತಲುಪಿದೆ ಎಂದು ತಿಳಿಸಿದ ಪೀಠ, ‘ಈ ಪತ್ರ ಬರೆದಿರುವುದು ಅದೇ ಯುವತಿಯೇ, ಅಲ್ಲವೇ ಎಂಬುದನ್ನು ಖಚಿತಪಡಿಸಬೇಕು ಮತ್ತು ಅದರಲ್ಲಿರುವ ಆರೋಪಗಳ ಬಗ್ಗೆ ಸ್ಪಂದಿಸಿ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಬೇಕು’ ಎಂದು ಪೀಠ ಎಸ್‌ಐಟಿಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿತು. ಪತ್ರವನ್ನು ಎಸ್‌ಐಟಿ ಅಧಿಕಾರಿಗಳಿಗೆ ಮುಚ್ಚಿದ ಲಕೋಟೆಯಲ್ಲಿ ರವಾನಿಸುವಂತೆ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿತು. ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿತು.

ಜಾರಕಿಹೊಳಿ ಆಕ್ಷೇಪಣೆ: ಸಿ.ಡಿ ಪ್ರಕರಣದ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ. ಅವರ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.