ADVERTISEMENT

ವಿಪತ್ತು ತಪ್ಪಿಸಲು ಜನರ ಸಹಕಾರ ಅಗತ್ಯ: ಶಾಲಿನಿ ರಜನೀಶ್‌

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:41 IST
Last Updated 20 ಜೂನ್ 2025, 15:41 IST
ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ, ರಕ್ಷಣಾ ಕಾರ್ಯಾಚರಣೆಯಲ್ಲಿ ವರ್ಚ್ಯುವಲ್ ರಿಯಾಲಿಟಿ (ವಿಆರ್‌) ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು  –ಪ್ರಜಾವಾಣಿ ಚಿತ್ರ
ಸಮ್ಮೇಳನದ ಭಾಗವಾಗಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನದಲ್ಲಿ, ರಕ್ಷಣಾ ಕಾರ್ಯಾಚರಣೆಯಲ್ಲಿ ವರ್ಚ್ಯುವಲ್ ರಿಯಾಲಿಟಿ (ವಿಆರ್‌) ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭೂಕುಸಿತ, ಪ್ರವಾಹದ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶಗಳಿಂದ ಜನರು ದೂರವಿರಬೇಕು. ಆಗ ಮಾತ್ರವೇ ಅವಘಡ ಸಂಭವಿಸಿದರೂ ಜೀವಹಾನಿ–ಆಸ್ತಿಹಾನಿಯಂತಹ ದುರಂತಗಳನ್ನು ತಪ್ಪಿಸಬಹುದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ, ಜೀವರಕ್ಷಾ ಟ್ರಸ್ಟ್‌, ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಗಳು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ, ‘ಸಮುದಾಯ ಆಧರಿತ ವಿಪತ್ತು ನಿರ್ವಹಣೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಕೋಲಾದ ಶಿರಾಲಿ ಬಳಿ ಈಚೆಗೆ ಗುಡ್ಡಕುಸಿತ ಸಂಭವಿಸಿತು. ಅದು ವಾಸಯೋಗ್ಯ ಪ್ರದೇಶವೇ ಆಗಿರಲಿಲ್ಲ. ಆದರೂ ಕುಟುಂಬವೊಂದು ಅಲ್ಲಿ ಮನೆ ನಿರ್ಮಿಸಿಕೊಂಡಿತ್ತು, ಗೂಡಂಗಡಿಯನ್ನೂ ನಡೆಸುತ್ತಿತ್ತು. ಗುಡ್ಡಕುಸಿದು ಮನೆ ನಾಶವಾಗುವುದರ ಜತೆಗೆ ಇಡೀ ಕುಟುಂಬವೇ ನಶಿಸಿಹೋಯಿತು’ ಎಂದರು.

ADVERTISEMENT

‘ಭೂಕುಸಿತದ ಅಪಾಯವಿದ್ದ ಆ ಸೂಕ್ಷ್ಮ ಪ್ರದೇಶದಿಂದ ಜನರು ದೂರ ಇದ್ದಿದ್ದರೆ, ಜೀವಹಾನಿ ಆಗುತ್ತಿರಲಿಲ್ಲ. ಜನ ಅಲ್ಲಿ ನೆಲಸುವುದನ್ನು ತಡೆಯುವ ಹೊಣೆಗಾರಿಕೆ ಸರ್ಕಾರದ್ದೇ ಹೌದು. ಆದರೆ ಅದು ಯಶಸ್ವಿಯಾಗುವುದು ಸಮುದಾಯವೂ ಸಹಕಾರ ನೀಡಿದಾಗ ಮಾತ್ರ’ ಎಂದರು.

‘ಬೆಂಗಳೂರಿನಲ್ಲಿ ರಾಜಕಾಲುವೆಯ ಪ್ರವಾಹದ ಸಾಧ್ಯತೆ ಇರುವೆಡೆ ಸಾವಿರಾರು ಮನೆಗಳನ್ನು, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ್ದಾರೆ. ಅವುಗಳ ತೆರವಿಗೆ ಮುಂದಾದರೆ, ಜನರೇ ಬೀದಿಗಿಳಿದು ಪ್ರತಿಭಟಿಸುತ್ತಾರೆ. ಸರ್ಕಾರವನ್ನು ಜನವಿರೋಧಿ ಎಂದು ದೂರುತ್ತಾರೆ. ಜನರೇ ಅಪಾಯವನ್ನು ಅರಿತುಕೊಂಡು ನಡೆದರೆ ಇಂತಹ ಸ್ಥಿತಿಗೆ ಆಸ್ಪದವಿರುವುದಿಲ್ಲ’ ಎಂದರು.

ವಿಪತ್ತು ನಿರ್ವಹಣೆ ಯಾವುದೇ ದೇಶ ಅಥವಾ ಸರ್ಕಾರಕ್ಕೆ ಅತ್ಯಂತ ಮಹತ್ವದ್ದು. ಚಂಡಮಾರುತಗಳು ಪ್ರವಾಹಗಳು ಸರ್ಕಾರವನ್ನೇ ಪತನಗೊಳಿಸಿದ ಉದಾಹರಣೆಗಳಿವೆ
ಸೈಯದ್ ಅತಾ ಹಸ್ನೈನ್‌ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ
ಯಾವುದೇ ವಿಪತ್ತಿನಲ್ಲಿ ಕೆಲವಾದರೂ ಜೀವಗಳನ್ನು ಉಳಿಸಲಾಗಿದೆ ಎಂದಾದರೆ ಅದಕ್ಕೆ ಪೂರ್ವಸಿದ್ಧತೆಯೇ ಪ್ರಮುಖ ಕಾರಣ. ತರಾತುರಿಯಲ್ಲಿ ಏನನ್ನೂ ಮಾಡಲಾಗದು
ಎಂ.ಎ. ಬಾಲಸುಬ್ರಹ್ಮಣ್ಯ ಜೀವರಕ್ಷಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.