ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗೆ ಅಸಮಾಧಾನದ ಅಲೆಗಳು ಏಳಲು ಆರಂಭವಾಗಿವೆ. ಪಕ್ಷದ ನಾಯಕತ್ವದ ವಿರುದ್ಧ ಕೆಲವು ಪ್ರಭಾವಿ ಮುಖಂಡರ ಅಸಮಾಧಾನವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ಪ್ರಭಾವಿ ಮುಖಂಡ, ಸಚಿವ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧದ ಅತೃಪ್ತಿಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರಿಂದ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದಾದನಂತರ ಅಧಿಕಾರಿ ಅವರ ಕೋಪವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಪಕ್ಷದ ಕೆಲವು ಹಿರಿಯ ಮುಖಂಡರುತೊಡಗಿದ್ದಾರೆ.
ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ನಂತರ ಸ್ಥಾನದಲ್ಲಿ ಸುವೇಂದು ಅಧಿಕಾರಿ ಇದ್ದಾರೆ. ಅವರ ಅಸಮಾಧಾನದ ಅಪಾಯವನ್ನು ಮನಗಂಡಿರುವ ಟಿಎಂಸಿ, ಮನವೊಲಿಕೆ ಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ. ನಂದಿಗ್ರಾಮ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿ ಅವರು ಈ ಭಾಗದ 23 ಜಿಲ್ಲೆಗಳ ಪೈಕಿ 18ರಲ್ಲಿ ಪ್ರಭಾವ ಉಳಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪುನಃ ಅಧಿಕಾರಕ್ಕೆ ಏರಬೇಕಾದರೆ ಇವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಟಿಎಂಸಿಗೆ ಅನಿವಾರ್ಯ ಎನ್ನಲಾಗುತ್ತಿದೆ.
‘ಕೆಲವು ಮುಖಂಡರು ಪಕ್ಷದ ವಿರುದ್ಧ ಮಾತನಾಡುತ್ತಿಲ್ಲವಾದರೂ, ಮುಂಬರುವ ದಿನಗಳಲ್ಲಿ ಅಧಿಕಾರಿ ಅವರ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ’ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ‘ಕೆಲವು ತಿಂಗಳ ಹಿಂದೆ ಪಕ್ಷದ ಸಂಘಟನೆಯಲ್ಲಿ ಮಾಡಿರುವ ಬದಲಾವಣೆಗಳಿಂದ ಅಧಿಕಾರಿ ಅವರು ಅಸಮಾಧಾನಗೊಂಡಿದ್ದಾರೆ. ಜಿಲ್ಲಾ ವೀಕ್ಷಕರ ಹುದ್ದೆಗಳನ್ನು ರದ್ದು ಮಾಡಿರುವುದು ಅವರ ಅಸಮಾಧಾನಕ್ಕೆ ಕಾರಣ’ ಎಂದು ಅಧಿಕಾರಿ ಅವರ ಸಮೀಪವರ್ತಿಯೊಬ್ಬರು ಹೇಳಿದ್ದಾರೆ.
ಪಿಕೆ ಮಧ್ಯಪ್ರವೇಶ ಕಾರಣ?
ವಿಧಾನಸಭಾ ಚುನಾವಣೆಗೆ ನೀತಿ ನಿರೂಪಿಸಲು ಚುನಾವಣಾ ನೀತಿ ನಿರೂಪಕ ಪ್ರಶಾಂತ್ ಕಿಶೋರ್ ಅವರ ತಂಡವನ್ನು (ಐ–ಪ್ಯಾಕ್) ಟಿಎಂಸಿ ನೇಮಕ ಮಾಡಿಕೊಂಡಿದೆ. ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವು ನಾಯಕರು, ಪ್ರಶಾಂತ್ ಕಿಶೋರ್ ಹಾಗೂ ಅವರ ತಂಡದ ಕಾರ್ಯವೈಖರಿಯ ಬಗ್ಗೆ ಆಕ್ರೋಶ ಹೊರಗೆಡವಿದ್ದಾರೆ.
ಮೂಲಗಳ ಪ್ರಕಾರ, ಸುವೇಂದು ಅಧಿಕಾರಿ ಅಲ್ಲದೆ ಇನ್ನೂ ನಾಲ್ವರು ಹಿರಿಯ ಸಚಿವರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದಾರೆ.
‘ಆರು ಮಂದಿ ಶಾಸಕರಷ್ಟೇ ಅಲ್ಲ, ಇನ್ನೂ ಹಲವು ಮುಖಂಡರು, ಜಿಲ್ಲಾಮಟ್ಟದ ನಾಯಕರು ಪಕ್ಷ ಹಾಗೂ ಐ–ಪ್ಯಾಕ್ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕಾಗಿ ಇಷ್ಟು ವರ್ಷಗಳ ಕಾಲ ದುಡಿದಿರುವ ನಮ್ಮನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ‘ಹೇಳಿದಷ್ಟುಮಾಡಿ’ ಎಂಬ ಸೂಚನೆ ನೀಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ.
ಪಕ್ಷದ ಸಂಘಟನೆ ಹಾಗೂ ಇತರ ವ್ಯವಹಾರಗಳನ್ನು ನಿರ್ವಹಿಸಲು ಐ–ಪ್ಯಾಕ್ ಸಂಸ್ಥೆಯು ರಾಜ್ಯದಲ್ಲಿ 1200ಕ್ಕೂ ಹೆಚ್ಚು ಸ್ವಯಂಸೇವಕರನ್ನು ನೇಮಕ ಮಾಡಿದೆ. ಉಸ್ತುವಾರಿಗೆಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕರಿಂದ ಐದು ಮಂದಿಯನ್ನು ನೇಮಕ ಮಾಡಿದೆ. ಇವರ ಕಾರ್ಯವೈಖರಿಯನ್ನು ವಿರೋಧಿಸಿ ಕೆಲವು ಕಾರ್ಯಕರ್ತರು ಪಕ್ಷದ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಿದ್ದರು.
ಸಮೀಕ್ಷೆಯ ಸಮಸ್ಯೆ
ಟಿಎಂಸಿಯ ಹಾಲಿ ಶಾಸಕರ ಜನಪ್ರಿಯತೆ ಮತ್ತು ಕಾಂಗ್ರೆಸ್ ಹಾಗೂ ಎಡಪಕ್ಷಗಳಿಂದ ಕೆಲವು ನಾಯಕರನ್ನು ಟಿಎಂಸಿಗೆ ಆಹ್ವಾನಿಸುವ ಸಾಧ್ಯತೆ ಹಾಗೂ ಪರಿಣಾಮಗಳ ಬಗ್ಗೆ ಐ–ಪ್ಯಾಕ್ ರಾಜ್ಯದಾದ್ಯಂತ ಸಮೀಕ್ಷೆಯೊಂದನ್ನು ನಡೆಸಿತ್ತು. ಇದು ಸಹ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಕೆಳ ಹಾಗೂ ಮಧ್ಯಮ ಹಂತದ ನಾಯಕರಲ್ಲಿ ಭ್ರಷ್ಟಾಚಾರ ಹಾಗೂ ಅಂತಃಕಲಹ ಇರುವುದನ್ನು ಸಮೀಕ್ಷೆ ಬಹಿರಂಗಪಡಿಸಿತ್ತು. ಪಕ್ಷಕ್ಕೆ ಇದು ದೊಡ್ಡ ಸಮಸ್ಯೆಯಾಗಬಹುದೆಂದೂ ಸಮೀಕ್ಷೆ ಹೇಳಿತ್ತು. ಇದಾದ ಬಳಿಕ ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಕೆಲವರು ಈಗ ಬಿಜೆಪಿ ಸೇರುವ ಬೆದರಿಕೆ ಹಾಕಿದ್ದರೆ ಇನ್ನೂ ಕೆಲವರು ಬಿಜೆಪಿ ನಾಯಕರ ಜತೆಗೆ ಸಂಪರ್ಕದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.