ADVERTISEMENT

ಬೀದರ್‌ ‘ಕೈ’ಯಲ್ಲಿ ಭಿನ್ನಮತ: ಸಚಿವ ಈಶ್ವರ ಖಂಡ್ರೆ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 23:30 IST
Last Updated 3 ಜೂನ್ 2025, 23:30 IST
<div class="paragraphs"><p>ಈಶ್ವರ ಬಿ. ಖಂಡ್ರೆ</p></div>

ಈಶ್ವರ ಬಿ. ಖಂಡ್ರೆ

   

ಬೆಂಗಳೂರು: ಬೀದರ್ ಜಿಲ್ಲಾ ಕಾಂಗ್ರೆಸ್‌ ಘಟಕದಲ್ಲಿ ಭಿನ್ನಮತ ತೀವ್ರಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಾಜಿ ಸಚಿವ ರಾಜಶೇಖರ ಪಾಟೀಲ ಬಣ ಬಂಡಾಯ ಎದ್ದಿದೆ.

ನಗರದ ‌‌ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಖಂಡ್ರೆ ವಿರುದ್ಧ ರಾಜಶೇಖರ ಪಾಟೀಲ ಮತ್ತು ವಿಧಾನ ಪರಿಷತ್‌ ಮಾಜಿ ಸದಸ್ಯ ಅರವಿಂದ ಅರಳಿ ನೇತೃತ್ವದಲ್ಲಿ ಮಂಗಳವಾರ ಸಭೆ ಸೇರಿ,‌ ಖಂಡ್ರೆ ಕಾರ್ಯವೈಖರಿಯ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದಾರೆ.

ADVERTISEMENT

ಸಭೆಯ ಬಳಿಕ ಮಾತನಾಡಿದ ರಾಜಶೇಖರ ಪಾಟೀಲ, ‘ಲೋಕಸಭೆ ಚುನಾವಣೆಯಲ್ಲಿ ಸಾಗರ್‌ ಖಂಡ್ರೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಆದರೆ, ಬೀದರ್‌ನಲ್ಲಿ ಹೊಂದಾಣಿಕೆಯ ರಾಜಕೀಯ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಲ್ಲಿ ಮತ್ತು ಅಮರ್‌ ಖಂಡ್ರೆ ಸ್ಪರ್ಧಿಸಿದ್ದರು. ಉಮಾಕಾಂತ ಅವರು ನಮ್ಮ ಬೀಗರಾಗಿದ್ದರೂ ಅಮರ್‌ ಖಂಡ್ರೆ ಅವರನ್ನು ಗೆಲ್ಲಿಸಿದ್ದೇವೆ.‌ ಆದರೂ ನಮ್ಮನ್ನು ಯಾವುದಕ್ಕೂ ಪರಿಗಣಿಸುವುದಿಲ್ಲ’ ಎಂದು ದೂರಿದರು.

‘ವಿಧಾನಸಭೆ ಚುನಾವಣೆಯಲ್ಲಿ ಬೀದರ್‌ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡರಲ್ಲಿ ಮಾತ್ರ ಪಕ್ಷ ಗೆದ್ದಿದೆ. ನಾಲ್ಕರಲ್ಲಿ ಸೋಲಾಗಿದೆ. ಗೆದ್ದ ಶಾಸಕರ ಬೇಡಿಕೆಗಳಿಗೂ ಸಚಿವರು ಸ್ಪಂದಿಸುತ್ತಿಲ್ಲ. ಕೆಡಿಪಿ ಸಭೆಯಲ್ಲಿ ಸಚಿವರೊಂದು ಕಡೆ, ಶಾಸಕರು ಮತ್ತೊಂದು ಕಡೆ ಇರುತ್ತಾರೆ. ನಮ್ಮಲ್ಲೇ ಒಗ್ಗಟ್ಟಿಲ್ಲ’ ಎಂದರು.

‘ಯಾರಿಗೂ ಯಾರೂ ಶಾಶ್ವತವಲ್ಲ. ಅಧಿಕಾರ ಯಾವಾಗ ಬೇಕಾದರೂ ಹೋಗಬಹುದು. ಆದರೆ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ಮಾಡುತ್ತೇವೆ’ ಎಂದರು.

ಅರಳಿ ಮಾತನಾಡಿ, ‘ನಾವು ಯಾರ ವಿರುದ್ಧವೂ ಅಲ್ಲ. ಪಕ್ಷ ಒಟ್ಟಿಗೆ ಹೋಗಬೇಕೆಂಬುದಷ್ಟೇ ನಮ್ಮ ಉದ್ದೇಶ’ ಎಂದರು.

‘ಖಂಡ್ರೆ‌ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮುಂದೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಚುನಾವಣೆಯಲ್ಲಿ ಗೆಲ್ಲಬೇಸಕಾದರೆ ಎಲ್ಲರೂ ಒಟ್ಟಾಗಿ ಹೋಗಬೇಕು. ಆದರೆ, ನಮ್ಮ ಬೇಡಿಕೆಗಳಿಗೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವುದಕ್ಕೂ ನಮ್ಮನ್ನು ಗಣನೆಗೆ ತೆಗೆದುಸಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.