ADVERTISEMENT

ಗ್ರಾಮ ವಾಸ್ತವ್ಯ; ಶಿಷ್ಟಾಚಾರ ಉಲ್ಲಂಘನೆ

ಶಾಸಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 21:45 IST
Last Updated 16 ಮಾರ್ಚ್ 2021, 21:45 IST

ಬೆಂಗಳೂರು: ಹಳ್ಳಿಗಳ ಕಡೆಗೆ ಜಿಲ್ಲಾಧಿಕಾರಿ ನಡೆ ಕಾರ್ಯಕ್ರಮದ ವೇಳೆ ಶಾಸಕರಿಗೆ ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸದಸ್ಗರು ಆಕ್ಷೇಪಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ‘ಇದೊಂದು ಒಳ್ಳೆಯ ಕಾರ್ಯಕ್ರಮ. ಆದರೆ, ಜಿಲ್ಲಾಧಿಕಾರಿ ಮಾತ್ರ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ನಮ್ಮ ಶಾಸಕ ಎಲ್ಲಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಶಾಸಕರು ಸಹ ಗ್ರಾಮ ವಾಸ್ತವ್ಯ ಮಾಡಲು ಅವಕಾಶ ನೀಡಬೇಕು‘ ಎಂದು ಕೋರಿದರು.

ಆಗ ಜೆಡಿಎಸ್‌ನ ಕೆ.ಅನ್ನದಾನಿ, ಸಾ.ರಾ.ಮಹೇಶ್‌, ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಎಚ್.ಪಿ.ಮಂಜುನಾಥ್‌, ಯತೀಂದ್ರ ಸಿದ್ದರಾಮಯ್ಯ, ಡಾ.ರಂಗನಾಥ್‌, ’ಈ ಕಾರ್ಯಕ್ರಮದ ವೇಳೆ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದೆ. ಸವಲತ್ತು ವಿತರಣೆ ವೇೆಳೆ ಶಾಸಕರನ್ನು ಆಹ್ವಾನಿಸುತ್ತಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

’ಸಂಜೆ 4 ಗಂಟೆಗೆ ಸವಲತ್ತು ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರಲ್ಲ‘ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

’ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ಮುದ್ರಿಸದಂತೆ ಸೂಚಿಸಲಾಗಿದೆ. ಎಲ್ಲ ಜನಪ್ರತಿನಿಧಿಗಳಿಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಲು ನಿರ್ದೇಶನ ನೀಡಿದ್ದೇನೆ. ಆಸಕ್ತಿ ಇರುವ ಶಾಸಕರು ಜಿಲ್ಲಾಧಿಕಾರಿ ಜತೆಗೆ ಗ್ರಾಮ ವಾಸ್ತವ್ಯ ಮಾಡಬಹುದು‘ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.