ADVERTISEMENT

ಪತ್ರಕರ್ತರಿಗೆ ಉಡುಗೊರೆ: ಕಾಂಗ್ರೆಸ್‌ಗೆ ಮಾತನಾಡುವ ನೈತಿಕ ಹಕ್ಕಿಲ್ಲ –ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 5:25 IST
Last Updated 30 ಅಕ್ಟೋಬರ್ 2022, 5:25 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಪತ್ರಕರ್ತರಿಗೆ ಉಡುಗೊರೆ ನೀಡುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆ ಆಗಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪತ್ರಕರ್ತರಿಗೆ ಉಡುಗೊರೆ ನೀಡಿರುವ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಇದು ಕಾಂಗ್ರೆಸ್ಸಿನ ಟೂಲ್ ಕಿಟ್‌ ಪರಿಣಾಮ. ಸುಳ್ಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಪತ್ರಕರ್ತರಿಗೆ ಉಡುಗೊರೆ ನೀಡುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ’ ಎಂದರು.

‘ಕಾಂಗ್ರೆಸ್‌ನವರು ಹಲವರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಐ ಫೋನ್, ಲ್ಯಾಪ್‌ಟಾಪ್‌, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ. ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ. ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲ ಪತ್ರಕರ್ತರು ಉಡುಗೊರೆ ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಈ ವಿಚಾರದ ಬಗ್ಗೆ ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ‘ ಎಂದರು.

ADVERTISEMENT

ನಂದೀಶ್ ಪ್ರಕರಣ: ತನಿಖೆಗೆ ಸೂಚನೆ
‘ಕೆ.ಆರ್‌.ಪುರ ಇನ್‌ಸ್ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಂದ ಎಲ್ಲ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಹಿಂದೆ ಮುಂದೆ ಯೋಚಿಸುವುದಿಲ್ಲ’ ಎಂದು ಮುಖ್ಯ ಮಂತ್ರಿ ಹೇಳಿದರು.

ಬಿಜೆಪಿಗೆ ಒಬಿಸಿ ಬೆಂಬಲದ ದ್ಯೋತಕವಾಗಿ ಸಮಾವೇಶ: ‘ಒಬಿಸಿ ದೊಡ್ಡ ಪ್ರಮಾಣದ ಬೆಂಬಲ ಬಿಜೆಪಿಗೆ ದೊರೆಯುತ್ತಿರುವ ದ್ಯೋತಕವಾಗಿ ಈ ಕಲಬುರಗಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ‘ ಎಂದು ಮುಖ್ಯಮಂತ್ರಿ ಹೇಳಿದರು.

‘ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶವಿದೆ. ನಂತರ ಪರಿಶಿಷ್ಟ ಜಾತಿಗಳ ಸಮಾವೇಶ ನಡೆಯಲಿದೆ. ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದ್ದು, ಡಿಸೆಂಬರ್ ತಿಂಗಳಲ್ಲಿ ಮಹಿಳೆಯರ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಪಕ್ಷದ ಅಧ್ಯಕ್ಷರು, ಕೋರ್ ಸಮಿತಿ ತೀರ್ಮಾನ ಮಾಡಿದೆ. ಆ ಪ್ರಕಾರ ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಸುಮಾರು 2 ಲಕ್ಷ ಜನ ಸೇರಲಿದ್ದು, ಒಬಿಸಿ ಮೋರ್ಚಾ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.