ADVERTISEMENT

ಗಲಭೆ; ಎಸ್‌ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 19:40 IST
Last Updated 1 ಸೆಪ್ಟೆಂಬರ್ 2020, 19:40 IST
   

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ನಡೆದಿದ್ದ ಗಲಭೆ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಚೇರಿಗಳ ಮೇಲೆ ಮಂಗಳವಾರ ದಾಳಿ ಮಾಡಿದರು.

ಗಲಭೆಯಲ್ಲಿ ಭಾಗಿಯಾಗಿದ್ದ ಹಾಗೂ ಪ್ರಚೋದನೆ ನೀಡಿದ್ದ ಆರೋಪದಡಿ ಎಸ್‌ಡಿಪಿಐ ಪಕ್ಷದ ಹಲವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು‌. ಅವರು ನೀಡಿದ ಮಾಹಿತಿ ಮೇರೆಗೆ ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಿ ತಪಾಸಣೆ ಮಾಡಲಾಗಿದೆ.

‘ನ್ಯಾಯಾಲಯದ ಅನುಮತಿ ಪಡೆದು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಹಲಸೂರ್ ಗೇಟ್ ಬಳಿ ಇರುವ ಎಸ್‌ಡಿಪಿಐ ಕಚೇರಿಗಳ ಮೇಲೆ ಮೂರು ವಿಶೇಷ ತಂಡಗಳು ದಾಳಿ ಮಾಡಿವೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ADVERTISEMENT

ಲ್ಯಾಪ್‌ಟಾಪ್ ಜಪ್ತಿ; ಸಿಸಿಬಿ ದಾಳಿ ಮಾಡಿದ ವೇಳೆ ಎಸ್‌ಡಿಪಿಐ ಕಚೇರಿಯಲ್ಲಿ ಲ್ಯಾಪ್‌ಟಾಪ್‌ಗಳು ಹಾಗೂ ಭಿತ್ತಿ ಪತ್ರಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

‘ಕರಪತ್ರಗಳು, ಕಾನೂನು ಪುಸ್ತಕಗಳು, ಸಿಎಎ ಹಾಗೂ ಎನ್‌ಆರ್‌ಸಿ ಕುರಿತ ಬ್ಯಾನರ್‌ ಮತ್ತು ಕಿರುಚಿತ್ರದ ಸಿ.ಡಿ, ಘೋಷಣಾ ಫಲಕಗಳು ಕಚೇರಿಯಲ್ಲಿದ್ದವು. ಎರಡು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಪರೀಕ್ಷೆಗಾಗಿ ತಾಂತ್ರಿಕ ವಿಭಾಗಕ್ಕೆ ನೀಡಲಾಗಿದೆ’ ಎಂದೂ ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.