ADVERTISEMENT

ಕೊರೊನಾ ನಿಯಮ ಉಲ್ಲಂಘನೆ ಆರೋಪ: ದೂರು ರದ್ದು ಕೋರಿ ಡಿ.ಕೆ. ಶಿವಕುಮಾರ್ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಮೇ 2023, 15:42 IST
Last Updated 26 ಮೇ 2023, 15:42 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   (ಸಂಗ್ರಹ ಚಿತ್ರ)

ಬೆಂಗಳೂರು: ‘ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಿಸಲಾಗಿರುವ ಎಂಟು ದೂರುಗಳನ್ನು ರದ್ದುಪಡಿಸಬೇಕು‘ ಎಂದು ಕೋರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಶಿವಕುಮಾರ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಎಂಟು ಅರ್ಜಿಗಳು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿದ್ದವು.

ವಿಚಾರಣೆ ವೇಳೆ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿದ ನ್ಯಾಯಪೀಠವು, ‘ಅರ್ಜಿಗಳಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆ ಎತ್ತಿದೆ‘ ಎಂಬ ಅಂಶವನ್ನು ಪರಿಗಣಿಸಿ, ‘ದಸ್ತಾವೇಜಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸಿ’ ಎಂದು ಶಿವಕುಮಾರ್ ಪರ ವಕೀಲರಿಗೆ ಸೂಚಿಸಿತು. ವಿಚಾರಣೆಯನ್ನು ಒಂದು ವಾರದ ಕಾಲ ಮುಂದೂಡಿತು.

ADVERTISEMENT

ತಡೆಯಾಜ್ಞೆ: ಮೇಕೆದಾಟು ಪಾದಯಾತ್ರೆಯಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಕಾಂಗ್ರೆಸ್‌ನ 31 ಮುಖಂಡರ ವಿರುದ್ಧ ರಾಮನಗರ ತಹಶೀಲ್ದಾರ್ ಜನವರಿ 13ರಂದು ರಾಮನಗರ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ಸಂಬಂಧ ಪೊಲೀಸರು, ಫೆಬ್ರುವರಿ 9ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿಗೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, 2022ರ ಜೂನ್‌ 28ರಂದು ತಡೆಯಾಜ್ಞೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣವೇನು?
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ 2022ರ ಜನವರಿ 9ರಿಂದ 10 ದಿನಗಳ ಪಾದಯಾತ್ರೆ ಹಮ್ಮಿಕೊಂಡಿತ್ತು. ‘ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾತನೂರು, ಉಪ್ಪಾರಪೇಟೆ, ಹಲಸೂರು ಗೇಟ್ ಮತ್ತು ಐಜೂರು ಪೊಲೀಸ್ ಠಾಣೆಗಳಲ್ಲಿ ಎಂಟು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.