ಬೆಂಗಳೂರು: ‘ದೇವರು, ಧರ್ಮ ಬಿಜೆಪಿ ಆಸ್ತಿಯೆ? ಪೂಜೆಯನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ಮಾತ್ರ ಮಾಡುತ್ತಾರೆಯೆ? ನೀರು, ಗಾಳಿ, ಬೆಳಕಿಗೆ ಜಾತಿ ಇದೆಯೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.
‘ಕಾಂಗ್ರೆಸ್ ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮವನ್ನು ನೋಡಿದ ಸ್ಥಳೀಯ ಶಾಸಕರು ಗಾಬರಿಯಾಗಿದ್ದರು. ರೈತ ಸಂಘದವರೂ ಟೀಕೆ ಮಾಡುತ್ತಿದ್ದಾರೆ. ಟೀಕೆಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಆದರೂ, ಎಲ್ಲರೂ ಒಟ್ಟಾಗಿ ಸಮಾಜ ಮುನ್ನಡೆಸಬೇಕಿದೆ’ ಎಂದರು.
‘ರಾಜೀವ್ ಗಾಂಧಿ ಅವರ ಹತ್ಯೆಯಿಂದ ಸ್ತ್ರೀ ಶಕ್ತಿಗೆ, ಯುವ ಪೀಳಿಗೆ ಹಾಗೂ ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದರು. ಮಹಿಳೆಯರಿಗೆ ಸ್ಥಳೀಯ ಸಂಸ್ಥೆಯಲ್ಲಿ ಶೇ 50 ರಷ್ಟು ಮೀಸಲಾತಿಗೆ ಶ್ರಮಿಸಿದ್ದರು. ಪಕ್ಷಾಂತರ ನಿಷೇಧಕ್ಕೆ ಕಾನೂನು ತಂದಿದ್ದರು’ ಎಂದು ಸ್ಮರಿಸಿದರು.
‘ಆರೋಗ್ಯ ಸಮಸ್ಯೆಯ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ವೀರೇಂದ್ರ ಪಾಟೀಲ ಅವರ ಬದಲಾವಣೆ, ಬಂಗಾರಪ್ಪ ನೇಮಕ, ಎಲ್ಲ ಜಾತಿಗಳ ನಾಯಕರಿಗೆ, ಯುವಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ, ಬಿ.ಕೆ. ಹರಿಪ್ರಸಾದ್ ಅವರಿಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ. ರಾಜ್ಯಸಭೆಗೆ ಆಯ್ಕೆ ನಿರ್ಧಾರಗಳ ಹಿಂದೆ ರಾಜೀವ್ ಅವರ ದೂರದೃಷ್ಟಿ ಇತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.