ADVERTISEMENT

ಡಿ.ಕೆ.ಶಿವಕುಮಾರ್‌ ಆಪ್ತರ ಅರ್ಜಿ: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 19:38 IST
Last Updated 14 ಅಕ್ಟೋಬರ್ 2019, 19:38 IST
   

ಬೆಂಗಳೂರು: ‘ಶಾಸಕ ಡಿ.ಕೆ.ಶಿವಕುಮಾರ್‌ಗೆ ಸೇರಿದ ದೆಹಲಿ ನಿವಾಸದಲ್ಲಿ ಆದಾಯ ತೆರಿಗೆ ದಾಳಿ ವೇಳೆ ಸಿಕ್ಕ ₹ 8.69 ಕೋಟಿ ದಾಖಲೆಯಿಲ್ಲದ ಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಮ್ಮನ್ನು ಜಾರಿ ನಿರ್ದೇಶನಾಲಯ (ಇ.ಡಿ)ಬಂಧಿಸದಂತೆ ನೀಡಲಾಗಿರುವ ಮಧ್ಯಂತರ ರಕ್ಷಣೆ ಮುಂದುವರಿಸಬೇಕು’ ಎಂದು ಕೋರಿ ಡಿ.ಕೆ.ಶಿವಕುಮಾರ್‌ ಆಪ್ತರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಕರಣದ ಆರೋಪಿಗಳಾದ ಸಚಿನ್ ನಾರಾಯಣ್, ಆಂಜನೇಯ, ಸುನಿಲ್ ಶರ್ಮ ಸಲ್ಲಿಸಿರುವ ಅರ್ಜಿಗಳನ್ನು ಅವರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ಪ್ರಸ್ತಾಪಿಸಿ ವಿಚಾರಣೆ ನಡೆಸುವಂತೆ ಕೋರಿದರು.

‘ಸುಪ್ರಿಂಕೋರ್ಟ್‌ಗೆ ರಜೆ ಇದ್ದ ಕಾರಣ ಹೈಕೋರ್ಟ್ ಏಕಸದಸ್ಯ ನ್ಯಾಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾಲ್ಕು ವಾರಗಳ ಕಾಲ ಅರ್ಜಿದಾರನ್ನು ಬಂಧಿಸದಂತೆ ಕಳೆದ ತಿಂಗಳ 17ರಂದು ಏಕಸದಸ್ಯ ನ್ಯಾಯಪೀಠ ಇ.ಡಿಗೆ ನೀಡಿರುವ ನಿರ್ದೇಶನ ಮುಂದುವರಿಸಬೇಕು. ಈ ಕುರಿತ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮಂಗಳವಾರ (ಅ.15) ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.