ADVERTISEMENT

ಕಮಿಷನ್‌ ಲೆಕ್ಕ ಬಿಟ್ಟು ಆಸ್ಪತ್ರೆ ಬಾಕಿ ಪಾವತಿಸಿ: ಡಿ.ಕೆ. ಶಿವಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 20:29 IST
Last Updated 30 ಏಪ್ರಿಲ್ 2021, 20:29 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಸಚಿವರೇ ಕಮಿಷನ್ ಲೆಕ್ಕ ಹಾಕಿಕೊಂಡು ಕೂತಿದ್ದೀರಾ? ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಿರುವ ಬಾಕಿಯನ್ನು ಆದಷ್ಟು ಬೇಗ ಪಾವತಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ತಿಂದಿದ್ದು, ಮುಂದೆ ತಿನ್ನೋದು ಸಾಕು. ಈಗ ಜನರ ಕಷ್ಟದ ಕಡೆಗೆ ಗಮನಹರಿಸಿ’ ಎಂದರು.

ಕಳೆದ ವರ್ಷ ಖಾಸಗಿ ಆಸ್ಪತ್ರೆಗಳ ಶೇಕಡ 80ರಷ್ಟು ಹಾಸಿಗೆಗಳನ್ನು ರಾಜ್ಯ ಸರ್ಕಾರ ಬಳಕೆ ಮಾಡಿತ್ತು. ಈವರೆಗೂ ಅವರಿಗೆ ಬಾಕಿ ಹಣ ಪಾವತಿಸಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ವೇತನ ನೀಡಲು, ಔಷಧಿ ಖರೀದಿಸಲು ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ADVERTISEMENT

ಕೋವಿಡ್‌ ಲಸಿಕೆ ವಿತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ತಯಾರಿಯನ್ನೇ ಮಾಡಿಲ್ಲ. ಲಸಿಕೆ ಪಡೆಯುವವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆನ್‌ಲೈನ್‌ ಸೌಲಭ್ಯದ ಬಳಕೆಯ ಅರಿವು ಇಲ್ಲದವರು ಏನು ಮಾಡಬೇಕು? ಈ ಸರ್ಕಾರ ಒಂದು ವರ್ಗದ ಜನರ ಬಗ್ಗೆ ಮಾತ್ರ ಯೋಚಿಸುತ್ತಿದೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ನಿಯಂತ್ರಣ ಹಾಗೂ ಚಿಕಿತ್ಸೆಯ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿವೆ. ಆದರೂ, ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ರೆಮ್‌ಡಿಸಿವಿರ್ ಚುಚ್ಚುಮದ್ದಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಔಷಧ ನಿಯಂತ್ರಕರು ಮೊಬೈಲ್‌ಗಳನ್ನು ಆಫ್‌ ಮಾಡಿಕೊಂಡಿದ್ದಾರೆ ಎಂದು ಶಿವಕುಮಾರ್‌ ಟೀಕಿಸಿದರು.

ಲಾಕ್‌ಡೌನ್‌ ಜಾರಿಗೊಳಿಸಿರುವ ಸರ್ಕಾರ, ಜನರಿಗೆ ಆರ್ಥಿಕ ಪರಿಹಾರ ನೀಡಬೇಕು. ಕಾರ್ಮಿಕರು ಮತ್ತೆ ವಲಸೆ ಹೋಗುತ್ತಿದ್ದಾರೆ. ಅದನ್ನು ತಡೆಯಲು ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

10 ಆಂಬುಲೆನ್ಸ್‌ ಸೇವೆಗೆ

ಸರ್ಕಾರ ನೀಡಿರುವ ಸಹಾಯವಾಣಿಯಿಂದ ಕೋವಿಡ್‌ ರೋಗಿಗಳಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಕೆಪಿಸಿಸಿಯಿಂದ ಸಹಾಯವಾಣಿ ಆರಂಭಿಸಿದ್ದು, 10 ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಈವರೆಗೆ 100ಕ್ಕೂ ಹೆಚ್ಚು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 300 ಜನರಿಗೆ ವೈದ್ಯರ ಮೂಲಕ ಮಾರ್ಗದರ್ಶನ ಕೊಡಿಸಿ, ಔಷಧಿ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.