ADVERTISEMENT

ಇ.ಡಿ.ಯಿಂದ ಡಿಕೆಶಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:38 IST
Last Updated 30 ಆಗಸ್ಟ್ 2019, 19:38 IST
   

ನವದೆಹಲಿ:ನೋಟು ರದ್ದತಿ ವೇಳೆ ₹ 8.60 ಕೋಟಿ ಅಕ್ರಮ ಹಣ ವಶಕ್ಕೆ ಪಡೆದ ಪ್ರಕರಣದ ವಿಚಾರಣೆಗಾಗಿ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಶುಕ್ರವಾರ ಸಂಜೆ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಹಾಜರಾದರು.

ಸುಮಾರು 5 ಗಂಟೆಗಳ ಕಾಲ ನಡೆದ ವಿಚಾರಣೆ ತಡರಾತ್ರಿ 11.40ಕ್ಕೆ ಅಂತ್ಯಗೊಂಡಿತು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಚಾರಣೆಗೆ ಸಹಕಾರ ನೀಡಿದ್ದೇನೆ. ಶನಿವಾರ ಬೆಳಿಗ್ಗೆ 11ಕ್ಕೆ ಬರುವಂತೆ ಸಮನ್ಸ್‌ ನೀಡಿದ್ದಾರೆ’ ಎಂದು ತಿಳಿಸಿದರು.

ಈ ಮೊದಲು ಇ.ಡಿ. ನೀಡಿದ್ದ ಸಮನ್ಸ್‌ ರದ್ದು ಪಡಿಸುವಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಹೈಕೋರ್ಟ್‌ ರದ್ದುಪಡಿಸಿತ್ತು. ಈ ಕಾರಣ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಬೆಂಗಳೂರಿನಿಂದ ಬಂದ ಶಿವಕುಮಾರ್‌, ಸಂಜೆ 6.30ರ ವೇಳೆಗೆ ಇಲ್ಲಿನ ಖಾನ್‌ ಮಾರ್ಕೆಟ್ ಪ್ರದೇಶದಲ್ಲಿರುವಲೋಕನಾಯಕ ಭವನದ 6ನೇ ಮಹಡಿಯಲ್ಲಿರುವ ಪ್ರಧಾನ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ADVERTISEMENT

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಬೆಂಗಳೂರು ಮತ್ತು ದೆಹಲಿಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೂ ಹಾಜರಿದ್ದು, ಕೆಲವು ಹೇಳಿಕೆಗಳನ್ನು ದಾಖಲಿಸಿಕೊಂಡರು.

2016ರ ನವೆಂಬರ್‌– ಡಿಸೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿನ ಮೂರು ಮನೆಗಳಲ್ಲಿ ಪ್ರತ್ಯೇಕವಾಗಿ ಹೊಸ ನೋಟುಗಳು ಪತ್ತೆಯಾದ ಈ ಪ್ರಕರಣದಲ್ಲಿ ಶಿವಕುಮಾರ್‌ ಅವರ ಬಂಧನದ ಸಾಧ್ಯತೆಯೂ ಇದ್ದು, ವಿಚಾರಣೆಯ ನಂತರ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಬಹುದಾಗಿದೆ.

ಸಂಜೆ 4.45ಕ್ಕೆ ದೆಹಲಿ ತಲುಪಿದ ಶಿವಕುಮಾರ್‌ ಅಲ್ಲಿಂದ ನೇರವಾಗಿ ಕರ್ನಾಟಕ ಭವನಕ್ಕೆ ಬಂದರು. ವಕೀಲರ ಅಭಿಪ್ರಾಯ ಪಡೆಯುವ ಸಲುವಾಗಿ ಅಲ್ಲಿಂದ ಕೂಡಲೇ ಸಂಸದ ಡಿ.ಕೆ. ಸುರೇಶ್‌ ಅವರ ನಿವಾಸಕ್ಕೆ ತೆರಳಿದ ಅವರು, ಅರ್ಧ ಗಂಟೆ ಚರ್ಚೆ ನಡೆಸಿ ವಿಚಾರಣೆಗಾಗಿ ಲೋಕನಾಯಕ ಭವನದತ್ತ ಧಾವಿಸಿದರು.

‘ನಾನು ಕಾನೂನಿಗೆ ಗೌರವ ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ವಿಚಾರಣೆಗಳನ್ನೂ ಎದುರಿಸುತ್ತೇನೆ. ಕಾನೂನನ್ನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ. ಈ ಕಾಯ್ದೆ ಅಡಿ ವಿಚಾರಣೆಗೆ ಯಾಕೆ ಕರೆಯಲಾಗಿದೆ ಎಂಬುದು ಗೊತ್ತಿಲ್ಲ. ವಿಚಾರಣೆಗೆ ಹಾಜರಾಗುವುದು ನನ್ನ ಕರ್ತವ್ಯ’ ಎಂದು ಇ.ಡಿ. ಕಚೇರಿ ಒಳಗೆ ಹೋಗುವ ಮುನ್ನ ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಯುವ ಕಾಂಗ್ರೆಸ್‌ ರಾಷ್ಟ್ರೀಯ ಘಟಕದ ಮಧ್ಯಂತರ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡ, ಕುಣಿಗಲ್‌ ಶಾಸಕ ಎಚ್‌.ಡಿ. ರಂಗನಾಥ ಹಾಗೂ ಕಾಂಗ್ರೆಸ್‌ ನಾಯಕ ಶಾಕಿರ್‌ ಸನದಿ ಮತ್ತಿತರರು ಶಿವಕುಮಾರ್‌ ಅವರ ವಿಚಾರಣೆಯ ಸಂದರ್ಭ ಇ.ಡಿ. ಕಚೇರಿ ಹೊರಗಡೆ ಕಾದು ಕುಳಿತಿದ್ದರು.

ನೋಟು ರದ್ದತಿ ವೇಳೆ ಆದಾಯ ಇಲಾಖೆ ಅಧಿಕಾರಿಗಳು ₹ 8.60 ಕೋಟಿ ಅಕ್ರಮ ಹಣ ವಶಕ್ಕೆ ಪಡೆದ ಪ್ರಕರಣದ ವಿಚಾರಣೆಗಾಗಿ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಶುಕ್ರವಾರ ಸಂಜೆ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ಹಾಜರಾದರು.

ಇ.ಡಿ. ನೀಡಿದ್ದ ಸಮನ್ಸ್‌ ರದ್ದುಪಡಿಸುವಂತೆ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಹೈಕೋರ್ಟ್‌ ರದ್ದುಪಡಿಸಿದ್ದರಿಂದ, ಸಂಸದ ಡಿ.ಕೆ. ಸುರೇಶ ಅವರೊಂದಿಗೆ ಬೆಂಗಳೂರಿನಿಂದ ಬಂದ ಶಿವಕುಮಾರ್‌, ಸಂಜೆ 6.30 ವೇಳೆಗೆ ಇಲ್ಲಿನ ಖಾನ್‌ ಮಾರ್ಕೆಟ್ ಪ್ರದೇಶದಲ್ಲಿರುವ ಲೋಕ ಕಲ್ಯಾಣ ಭವನದ 6ನೇ ಮಹಡಿಯಲ್ಲಿರುವ ಪ್ರಧಾನ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಮೆಮೊ ವಜಾ

‘ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಹಾಜರಾದ ಸಮಯದಲ್ಲಿ ನನ್ನನ್ನು ಬಂಧಿಸಿದಂತೆ ಮಧ್ಯಂತರ ರಕ್ಷಣೆ ನೀಡಿ’ ಎಂದು ಕೋರಿದ್ದ ಶಾಸಕ ಡಿ.ಕೆ.ಶಿವಕುಮಾರ್‌ ಮನವಿಯನ್ನು ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ.

ಈ ಕುರಿತಂತೆ ಶಿವಕುಮಾರ್ ಪರ ವಕೀಲರು ಶುಕ್ರವಾರ ಸಲ್ಲಿಸಿದ್ದ ಮೆಮೊ (ಜ್ಞಾಪನಾ ಪತ್ರ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈಗಾಗಲೇ ಈ ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಪುನಃ ನಿಮ್ಮ ಈ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ನಿನ್ನೆ (ಆ.29) ರಾತ್ರಿ ಸಮನ್ಸ್ ನೀಡಿ, ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ. ನಿನ್ನೆ ಇದೇ ನ್ಯಾಯಪೀಠ ನೀಡಿರುವ ತೀರ್ಪು ಪ್ರಶ್ನಿಸಿ ನಾನು ಮೇಲ್ಮನವಿ ಸಲ್ಲಿಸಬೇಕಿದೆ. ಈಗ ಮೂರು ದಿನ ಸರ್ಕಾರಿ ರಜೆ ಇದೆ. ಆದ್ದರಿಂದ, ಇ.ಡಿ ಮುಂದೆ ವಿಚಾರಣೆಗೆ ಹಾಜರಾದಾಗ ಬಂಧನ ಮಾಡದಂತೆ ಮಧ್ಯಂತರ ರಕ್ಷಣೆ ನೀಡಬೇಕು’ ಎಂದು ಶಿವಕುಮಾರ್‌ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.