
ಬೆಂಗಳೂರು: ‘ನಾವು (ಕಾಂಗ್ರೆಸ್) ಸೇವೆ ಮಾಡುತ್ತಿರುವುದು ನಾಡಿನ ಜನರಿಗಾಗಿಯೇ, ಹೊರತು ಕುಟುಂಬಕ್ಕಾಗಿ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ’ ಎಂದು ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಶಿವಕುಮಾರ್, ‘ಕುಟುಂಬದ ಆಸೆ, ಭಾವನೆಗಳು, ತೊಂದರೆಯಲ್ಲಿ ಇರುವುದರ ಬಗ್ಗೆ ಅವರು ಮಾತನಾಡಿಕೊಳ್ಳಲಿ. ನಾವು ಈ ದೇಶದ ಜನರ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ’ ಎಂದರು.
‘ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದುದ್ದಕ್ಕೂ ನಿಮ್ಮನ್ನು ಕುಮಾರಸ್ವಾಮಿ ನೆನಪಿಸಿಕೊಂಡಿದ್ದರು’ ಎಂದಾಗ, ‘ನಮ್ಮನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ಶಕ್ತಿ, ಜೀವ, ಧೈರ್ಯ ಯಾವುದೂ ಬರುವುದಿಲ್ಲ. ಅದಕ್ಕೆ ನೆನಪಿಸಿಕೊಳ್ಳುತ್ತಾರೆ’ ಎಂದರು.
‘ಮನೆಗೆ ನುಗ್ಗಿ ಬಂಧಿಸಲಾಯಿತು’ ಎಂಬ ಎಚ್.ಡಿ. ದೇವೆಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ‘ಕಾನೂನು ಎಲ್ಲರಿಗೂ ಒಂದೇ. ಯಾರಿಗೆ ಏನೇನು ಕಾನೂನು ಮಾಡಬೇಕು ಅನ್ನೋದಕ್ಕೆ ನೀವೇ ಉತ್ತರ ನೀಡಬೇಕು’ ಎಂದರು.
ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ವೇಳೆ ಸದನದಲ್ಲಿ ನಡೆದ ಬೆಳವಣಿಗೆಗಳ ಕುರಿತು ರಾಷ್ಟ್ರಪತಿಗೆ ರಾಜ್ಯಪಾಲರು ವರದಿ ನೀಡಿರುವ ಬಗ್ಗೆ ಕೇಳಿದಾಗ, ‘ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ರಾಜ್ಯಪಾಲರು ಭಾಷಣ ಓದಿ, ರಾಷ್ಟ್ರಗೀತೆ ಆಗುವ ತನಕ ಇರಬಹುದಿತ್ತು. ಸರ್ಕಾರ ನೀಡಿದ ಭಾಷಣ ಓದುವುದು ಸಂವಿಧಾನ ರಕ್ಷಣೆಯ ಕರ್ತವ್ಯ. ರಾಜ್ಯಪಾಲರಿಗೆ ನರೇಗಾ ಕುರಿತ ವಿಷಯಗಳಿದ್ದ ಭಾಷಣ ಓದುವುದಕ್ಕೆ ಇಷ್ಟ ಇಲ್ಲದಿದ್ದರೆ ಹಾಗೆ ಇರಬಹುದಿತ್ತು. ಜತೆಗೆ ಸಾಕಷ್ಟು ಬೇರೆ ಅವಕಾಶಗಳೂ ಇದ್ದವು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.