ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ನೀಡಿದ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 10:50 IST
Last Updated 19 ನವೆಂಬರ್ 2025, 10:50 IST
   

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸುಳಿವನ್ನು ನೀಡಿದರು.

ಕಾಂಗ್ರೆಸ್‌ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ನಾನು ಶಾಶ್ವತವಾಗಿ ಇರಲು ಬಯಸುವುದಿಲ್ಲ. 2020ರಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಈಗಾಗಲೇ ಐದು ವರ್ಷ, ಐದು ತಿಂಗಳು ಪೂರೈಸಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಉಪಮುಖ್ಯಮಂತ್ರಿಯಾದೆ. ಆಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧವಾಗಿದ್ದೆ. ಹೈಕಮಾಂಡ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯಂತೆ ಮುಂದುವರಿದೆ. ಬರುವ ಮಾರ್ಚ್‌ಗೆ ಆರು ವರ್ಷ ತುಂಬುತ್ತದೆ. ಇತರರಿಗೂ ಅವಕಾಶ ನೀಡಬೇಕು’ ಎಂದರು.

ಅನಿರೀಕ್ಷಿತ ಹೇಳಿಕೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಗೊಂದಲಕ್ಕೆ ಒಳಗಾದರು. ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಪಡಿಸಿದ ಶಿವಕುಮಾರ್‌, ‘ನಾನು ಇದ್ದೇನೋ, ಇಲ್ಲವೋ ಮುಖ್ಯವಲ್ಲ. ಸ್ಥಾನತೊರೆದರೂ, ನಾಯಕತ್ವ, ಪಕ್ಷದ ಮುಂಚೂಣಿಯಲ್ಲಿ ಇದ್ದು ಕೆಲಸ ಮಾಡುತ್ತೇನೆ. ನಾನು ಎಲ್ಲಿದ್ದೇನೆ. ಏನಾಗಿದ್ದೇನೆ ಎನ್ನುವುದು ಮುಖ್ಯವಲ್ಲ. ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳು ಶಾಶ್ವತವಾಗಿರುತ್ತದೆ. ಪಕ್ಷದ 100 ಹೊಸ ಭವನಗಳನ್ನು ಆರಂಭಿಸಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಒಂದು ಮಾದರಿಯನ್ನು ಸ್ಥಾಪಿಸಿದ್ದೇನೆ. ಗಾಂಧಿ ಕುಟುಂಬ ಹಾಗೂ ಎಐಸಿಸಿ ಅಧ್ಯಕ್ಷರು ಬಯಸುವವರೆಗೂ ಕೆಲಸ ಮಾಡುತ್ತೇಲೇ ಇರುತ್ತೇನೆ’ ಎಂದು ಹೇಳಿದರು. 

ADVERTISEMENT

ಬಿಹಾರ ಚುನಾವಣಾ ಫಲಿತಾಂಶ ಉಲ್ಲೇಖಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಬೇರುಗಳು ಗಟ್ಟಿಯಾಗಿವೆ. ಖಂಡಿತವಾಗಿಯೂ ಕರ್ನಾಟಕದಲ್ಲಿ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ. ಪಕ್ಷದ ಕಾರ್ಯಕರ್ತರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಆದರೆ, ನಾನು ಓಡಿಹೋಗುವುದಿಲ್ಲ ಎಂದರು.

ಕಾರ್ಯಕ್ರಮ ಮುಗಿದು ಶಿವಕುಮಾರ್‌ ಅವರು ಭವದಿಂದ ಹೊರಬರುತ್ತಿದ್ದಂತೆ ಕಾರ್ಯಕರ್ತರು ‘ಡಿ.ಕೆ. ಶಿವಕುಮಾರ್‌’ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.