
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
– ಪ್ರಜಾವಾಣಿ ಚಿತ್ರ
ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವ ಜಟಾಪಟಿ, ಬೆಳಗಾವಿಯಲ್ಲಿನ ಔತಣಕೂಟದ ರಾಜಕೀಯದ ನಡುವೆಯೇ ಇಲ್ಲಿಗೆ ಬಂದಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಕನಸು ಸಾಕಾರಗೊಳಿಸಿಕೊಳ್ಳುವ ಯತ್ನವನ್ನು ಮುಂದುವರಿಸಿದರು.
ಮತಕಳವು ವಿರೋಧಿಸಿ ಎಐಸಿಸಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತಮ್ಮ ದಂಡಿನೊಂದಿಗೆ ಬಂದಿದ್ದ ಶಿವಕುಮಾರ್, ತಮ್ಮ ನಾಯಕರನ್ನು ಹಲವು ಸುತ್ತಿನಲ್ಲಿ ಭೇಟಿಯಾದರು.
‘ಶಿವಕುಮಾರ್ ಬೇಡಿಕೆಯನ್ನು ಹೈಕಮಾಂಡ್ ಒಪ್ಪಿಲ್ಲ. ಸಿದ್ದರಾಮಯ್ಯ ಅವಧಿ ಪೂರೈಸುತ್ತಾರೆ’ ಎಂದು ಯತೀಂದ್ರ ಅವರು ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್‌ನಲ್ಲಿ ಒಳರಾಜಕೀಯ ಬಿರುಸುಗೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ, ರಾಜ್ಯ ಸಮಸ್ಯೆಗಿಂತ ಕಾಂಗ್ರೆಸ್ ತೊಳಲಾಟವೇ ಹೆಚ್ಚು ಸದ್ದು ಮಾಡಿತ್ತು. ಔತಣಕೂಟದ ನೆಪದಲ್ಲಿ ನಡೆದ ಬಲಪ್ರದರ್ಶನದ ಚಟುವಟಿಕೆಗಳು ಕಾಂಗ್ರೆಸ್‌ನ ಆಂತರಿಕ ಯುದ್ಧವನ್ನು ಬೀದಿಗೆ ತಂದಿದ್ದವು.
ಏತನ್ಮಧ್ಯೆ ನಡೆದ ದೆಹಲಿಯ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರ ಜತೆಗೆ ಬಂದಿದ್ದರು. ಪೂರ್ವ ನಿಗದಿಯಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಳಗಾವಿಗೆ ವಾಪಸ್ ಆದರು.
ಕಾರ್ಯಕ್ರಮದ ವೇಳಾಪಟ್ಟಿಯಂತೆ ಶಿವಕುಮಾರ್ ಅವರು ರಾಜ್ಯಕ್ಕೆ ಮಂಗಳವಾರ ತೆರಳಬೇಕಿತ್ತು. ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದರಿಂದಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜತೆಗೆ ಸೋಮವಾರವೇ ಬೆಂಗಳೂರಿಗೆ ಮರಳಿದರು.
ಇಂದಿರಾಭವನದಲ್ಲಿ ನಡೆದ ಭೋಜನಕೂಟದ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಖರ್ಗೆಯವರನ್ನು ಶಿವಕುಮಾರ್ ಭೇಟಿಯಾದರು. ಈ ವೇಳೆ, ರಾಹುಲ್ ಜತೆಗೆ ಒಂದೂವರೆ ನಿಮಿಷ ಮಾತುಕತೆ ನಡೆಯಿತು ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.
ಅದಾದ ಬಳಿಕ ಪ್ರತ್ಯೇಕವಾಗಿ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕದಲ್ಲಿನ ಪಕ್ಷದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಆದರೆ, ಅದರ ಫಲಿತಾಂಶ ಏನೆಂಬುದು ಬಹಿರಂಗವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.