ಬೆಂಗಳೂರು: ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಇಷ್ಟೊಂದು ಪ್ರಶ್ನೆಗಳನ್ನು ಏಕೆ ಕೇಳಲಾಗಿದೆ? ತುಂಬಾ ಹೆಚ್ಚಾದವು. ಅವುಗಳನ್ನು ಇನ್ನೂ ಸರಳೀಕರಿಸಬೇಕಿತ್ತು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಶನಿವಾರದಿಂದ(ಅ.4) ಆರಂಭವಾಗಿರುವ ಸಮೀಕ್ಷೆಗೆ ತಮ್ಮ ನಿವಾಸದಲ್ಲಿ ಅವರು ಚಾಲನೆ ನೀಡಿದರು. ಸಮೀಕ್ಷೆಗೆ ತಮ್ಮ ಕುಟುಂಬದ ಮಾಹಿತಿ ಒದಗಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕೋಳಿ, ಚಿನ್ನ, ಮೇಕೆ–ಕುರಿಗಳೆಷ್ಟಿವೆ ಎಂಬ ಪ್ರಶ್ನೆಗಳಿವೆ. ನಾನೆಲ್ಲಿ ಕುರಿಗಳನ್ನು ಸಾಕಲಿ? ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳು ಹೆಚ್ಚಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇಷ್ಟೊಂದು ಪ್ರಶ್ನೆಗಳಿವೆ ಎಂಬುದು ನನಗೆ ಗೊತ್ತಿರಲಿಲ್ಲ. ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ನೆಲಸಿರುವ ನಾನು, ಇಂದು ಸಮೀಕ್ಷೆಗೆ ಮಾಹಿತಿಗಳನ್ನು ನೀಡಿದ ಸಂದರ್ಭದಲ್ಲಿ ಪ್ರಶ್ನೆಗಳು ಅರಿವಿಗೆ ಬಂದವು. ಇದು ತುಂಬಾ ಹೆಚ್ಚಾಯಿತು. ಹಳ್ಳಿಗಳ ಕಡೆ, ಕುರಿ–ಮೇಕೆ ಎಂದು ಕೇಳಿದರೆ ಪರವಾಗಿಲ್ಲ. ಆದರೆ, ನಗರಗಳಲ್ಲಿ, ಬೆಂಗಳೂರಿನಲ್ಲಿ ಸಮೀಕ್ಷೆ ಎಂಬುದು ತುಂಬಾ ಸೂಕ್ಷ್ಮ. ಇಷ್ಟೊಂದು ಪ್ರಶ್ನೆ ಕೇಳಿದರೆ ಜನರಿಗೆ ತಾಳ್ಮೆ ಇರುವುದಿಲ್ಲ’ ಎಂದರು.
‘ಜಿಬಿಎ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ಮಾಹಿತಿ ಒದಗಿಸಬೇಕು. ಈ ಸಮೀಕ್ಷೆಗೆ ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.
‘ಎಲ್ಲ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಗತ್ಯ’ ಎಂದರು.
‘ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಹೇಳಿಕೆಗೆ ‘ದೊಡ್ಡವರ ಬಗ್ಗೆ ನಾವೇನು ಮಾತಾಡೋದು’ ಎಂದು ಪ್ರತಿಕ್ರಿಯಿಸಿದರು.
‘ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷಕರು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಅಂತಹ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಎನ್ನಬಹುದು’ ಎಂದು ಶಿವಕುಮಾರ್ ಹೇಳಿದರು.
ಕೆಲವು ವೈಯಕ್ತಿಕ ಮಾಹಿತಿ ಪ್ರಶ್ನೆಗಳಿವೆ ಎಂದು ಸುದ್ದಿಗಾರರು ಕೇಳಿದಾಗ ‘ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮತೆಯಿಂದ ಮಾಡಬೇಕು ಎಂದು ಸಮೀಕ್ಷಕರಿಗೆ ಹೇಳಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
‘ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬೇಕು. ತಿಳಿವಳಿಕೆ ನೀಡಬೇಕಾದದ್ದು ನಮ್ಮ ಕರ್ತವ್ಯ. ನಾವದನ್ನು ಮಾಡುತ್ತೇವೆ. ಸರ್ವರ್ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುತ್ತಾರೆ’ ಎಂದರು.
ಪ್ರಶ್ನೆಗಳಿಗೆ ಡಿಕೆಶಿ ‘ನಿರುತ್ತರ’
ವಿದ್ಯಾಭ್ಯಾಸ ವಿವರಗಳು?: ಏನೂ ಹೇಳಲಿಲ್ಲ
ಸರ್ಕಾರದಿಂದ ಪಡೆದ ಉದ್ಯೋಗ ಸೌಲಭ್ಯಗಳು?: ಏನೂ ಹೇಳಲಿಲ್ಲ
ಪಶುಸಂಗೋಪನೆ ವಿವರ?: ಏನಿಲ್ಲ
ಸರ್ಕಾರದಿಂದ ಶೈಕ್ಷಣಿಕ ಸೌಲಭ್ಯ ಪಡೆದುಕೊಂಡಿದ್ದೀರಾ?: ಇಲ್ಲ ಇಲ್ಲ
ಮೀಸಲಾತಿಯಿಂದ ಸೌಲಭ್ಯ ಪಡೆದುಕೊಂಡಿದ್ದೀರಾ?: ಇಲ್ಲ
ಸಂವಿಧಾನದ 371 ಜೆ ಅಡಿ ಬರುತ್ತೀರಾ?: ಇಲ್ಲ
ಹಾಲಿ ಕೆಲಸ ಮಾಡುತ್ತಿದ್ದೀರಾ?: ಸಾರ್ವಜನಿಕ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.