
ಡಿ.ಕೆ.ಶಿವಕುಮಾರ್
ಬೆಂಗಳೂರು: ‘ವಿಧಾನ ಪರಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಹಳ ಘನತೆ ಇದೆ. ಆ ಸ್ಥಾನದಲ್ಲಿ ಇರುವ ಛಲವಾದಿ ನಾರಾಯಣಸ್ವಾಮಿ ಅವರು ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿತುಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಉಪಹಾರ ಕೂಟಕ್ಕೆ ಹೋಗಿದ್ದಾಗ ಇಬ್ಬರು ನಾಯಕರೂ ಕಟ್ಟಿಕೊಂಡಿದ್ದ ಕೈಗಡಿಯಾರಗಳ ಬಗ್ಗೆ ಹೇಳಿಕೆ ನೀಡಿದ್ದ ನಾರಾಯಣಸ್ವಾಮಿ, ‘ಈ ಕೈಗಡಿಯಾರಗಳ ಬಗ್ಗೆ ಶಿವಕುಮಾರ್ ಅವರು ಮಾಹಿತಿ ನೀಡಿರಲಿಲ್ಲ’ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್ ಅವರು, ‘ಕೈಗಡಿಯಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸಿದ್ದೇನೋ ಇಲ್ಲವೋ ಎಂಬುದನ್ನು ನಾರಾಯಣಸ್ವಾಮಿ ಅವರು ಪರಿಶೀಲಿಸಿಕೊಳ್ಳಬಹುದು. ಲೋಕಾಯುಕ್ತ ಸಂಸ್ಥೆಗೆ ಮನವಿ ಸಲ್ಲಿಸಿದರೆ, ನನ್ನೆಲ್ಲಾ ದಾಖಲೆಗಳನ್ನು ನೀಡುತ್ತೇನೆ’ ಎಂದರು.
‘ನವಿಲನ್ನು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ’ ಆಡಬೇಡಿ. ನಿಮಗೆ ಇರುವ ಸಾಂವಿಧಾನಿಕ ಹುದ್ದೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ವಿವೇಕದಿಂದ ವರ್ತಿಸಿ. ಏನನ್ನೂ ತಿಳಿದುಕೊಳ್ಳದೆ ಮಾತನಾಡುವುದು ನಿಮಗೆ ಘನತೆ ತರುವುದಿಲ್ಲ’ ಎಂದು ಹೇಳಿದರು.
ನಂತರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಲೋಕಾಯುಕ್ತಕ್ಕೆ ನಾನು ಸಲ್ಲಿಸಿರುವ ಪ್ರಮಾಣಪತ್ರವನ್ನು ಇಲ್ಲಿಯೇ ಹಾಕುತ್ತಿದ್ದೇನೆ. ಒಮ್ಮೆ ನೋಡಿಕೊಳ್ಳಿ. ಬೇಕಿದ್ದರೆ ಲೋಕಾಯುಕ್ತಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಲೋಕಾಯುಕ್ತಕ್ಕೆ ತಾವು ಸಲ್ಲಿಸಿದ್ದ ಪ್ರಮಾಣಪತ್ರಗಳ ಚಿತ್ರಗಳನ್ನು ಪೋಸ್ಟ್‌ನಲ್ಲಿ ಲಗತ್ತಿಸಿದ್ದಾರೆ.
‘ಡಿ.ಕೆ.ಶಿವಕುಮಾರ್ ಅವರೇ ಹೇಳಿಕೊಂಡಿರುವಂತೆ ಅವರ ‘ಕಾರ್ಟಿಯರ್’ ಕೈಗಡಿಯಾರ 7–8 ವರ್ಷ ಹಳೆಯದು. ಆದರೆ, 2018 ಮತ್ತು 2023ರ ಚುನಾವಣಾ ಅಫಿಡವಿಟ್‌ನಲ್ಲಿ ಅದರ ಉಲ್ಲೇಖವಿಲ್ಲ. 7 ವರ್ಷದ ಹಿಂದಿನಿಂದಲೂ ಇರುವ, ಈಗ ಕೈಯಲ್ಲಿ ಕಟ್ಟಿರುವ ಕಾರ್ಟಿಯರ್ ವಾಚನ್ನು ಯಾಕೆ ಅಫಿಡವಿಟ್‍ನಲ್ಲಿ ತಿಳಿಸಿಲ್ಲವೇಕೆ? ಅದು ಕದ್ದ ಕೈಗಡಿಯಾರವಾ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮ್ಮ ಅಫಿಡವಿಟ್‌ನಲ್ಲಿ ದುಬಾರಿ ಬೆಲೆಯ ರೋಲೆಕ್ಸ್ ಮತ್ತು ಹ್ಯೂಬ್ಲೊ ಗಡಿಯಾರಗಳನ್ನು ಉಲ್ಲೇಖಿಸಿ ದ್ದೀರಿ. ಅಫಿಡವಿಟ್‌ನಲ್ಲಿ ಇಲ್ಲದ ಕಾರ್ಟಿಯರ್, ಈಗ ನಿಮ್ಮ ಮಣಿಕಟ್ಟಿನಲ್ಲಿ ದಿಢೀರ್ ಎಂದು ಪ್ರತ್ಯಕ್ಷವಾದದ್ದಾದರೂ ಹೇಗೆ’ ಎಂದು ಕೇಳಿದರು.
ಛಲವಾದಿ ನಾರಾಯಣಸ್ವಾಮಿ ಅವರೇ, ನನಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ಕೈಗಡಿಯಾರ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ?ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.