ಡಿ.ಕೆ ಶಿವಕುಮಾರ್
ಕೇಂದ್ರ ಸಚಿವರ ಭೇಟಿ ನೆಪದಲ್ಲಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಭೇಟಿ ಸಾಧ್ಯವಾಗದೇ ವಾಪಸಾಗಿದ್ದಾರೆ. ‘ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ, 2028ರ ಚುನಾವಣೆಗೂ ನನ್ನದೇ ನಾಯಕತ್ವ’ ಎಂದು ದೆಹಲಿಯಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ್ದರು. ಅದಕ್ಕೆ ಶುಕ್ರವಾರ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್‌ನ ಹಲವು ನಾಯಕರ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ
ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನದ ವಿಚಾರ ಕುರಿತು ಯಾರು ಏನೇನು ಮಾತನಾಡಿದ್ದಾರೆ, ಅವರೇ ಪ್ರಶ್ನೆ-ಉತ್ತರ ಎಲ್ಲವನ್ನೂ ನೀಡಿದ್ದಾರೆ...’
ಇದು ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಇಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶುಕ್ರವಾರ ಶಿವಕುಮಾರ್ ಅವರು ನೀಡಿದ ಪ್ರತಿಕ್ರಿಯೆ.
‘ಕೇಂದ್ರ ಸಚಿವರು ಹಾಗೂ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಅವರು ಬೆಂಗಳೂರಿಗೆ ಮರಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರ ಹೇಳಿಕೆ ತಡವಾಗಿ ಗಮನಿಸಿದೆ. ಈ ವಿಚಾರವಾಗಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಆವಶ್ಯಕತೆಯೂ ಇಲ್ಲ. ಯಾರು ಎಷ್ಟೇ ತಿರುಗಿಸಿ ಕೇಳಿದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಉತ್ತರ ನೀಡಲ್ಲ’ ಎಂದರು.
‘ಪಕ್ಷ ನನಗೆ ಸಂಘಟನೆಯ ಜವಾಬ್ದಾರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇರುತ್ತದೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ದೀಕ್ಷೆ ನೀಡಿದ್ದು, ನಾವೆಲ್ಲರೂ ಸಂತೋಷವಾಗಿ ಸ್ವೀಕರಿಸಿದ್ದೇವೆ’ ಎಂದು ಹೇಳಿದರು.
ದೆಹಲಿ ಭೇಟಿ ವೇಳೆ ಸುರ್ಜೇವಾಲಾ ಹೊರತಾಗಿ ಬೇರೆ ಯಾವ ಹೈಕಮಾಂಡ್ ನಾಯಕರನ್ನೂ ಭೇಟಿಯಾಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ಕೆಲವು ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿರುವವರಿಗೆ, ಮಾತು ಕೊಟ್ಟವರಿಗೆ ಸ್ಥಾನಮಾನ ನೀಡಬೇಕಿದೆ. ಪ್ರಕ್ರಿಯೆ ಸಾಕಷ್ಟು ತಡವಾಗಿದೆ. ಪಕ್ಷದ ಸಂಘಟನೆಗೆ ಶ್ರಮಿಸಿದವರ ಹೆಸರನ್ನು ಸೇರಿಸಿ, ಮತ್ತೊಮ್ಮೆ ದೆಹಲಿಗೆ ಕಳುಹಿಸಿ ಅನುಮತಿ ಪಡೆಯಲಾಗುವುದು. ಎಲ್ಲಾ ಶಾಸಕರು ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ. ಸಚಿವರ ಅಭಿಪ್ರಾಯ ಸಂಗ್ರಹಿಸಬೇಕಿದೆ. 10 ದಿನಗಳ ಒಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ ಸಚಿವರನ್ನೇ ಕೇಳಿ. ನಾನು ಪಕ್ಷದ ವಕ್ತಾರನೇ ಹೊರತು, ಯಾವುದೇ ವ್ಯಕ್ತಿಯ ವಕ್ತಾರನಲ್ಲಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ/ಉಪಮುಖ್ಯಮಂತ್ರಿ
ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಾಗಲಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಾಗಲಿ ಖಾಲಿ ಇಲ್ಲ. ಈ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ.ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ
ಶಿವಕುಮಾರ್ ಅವರಿಗೆ ಕೆಲವು ಶಾಸಕರ ಬೆಂಬಲ ಮಾತ್ರವಿದೆ ಎಂದು ಸಿದ್ದರಾಮಯ್ಯ ಹೇಳಿದ್ದರಲ್ಲ?
ನಿಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದ್ದಾರೆ. ಅವರು ಉತ್ತರ ನೀಡಿದ ಮೇಲೆ ಮತ್ತೆ ಆ ವಿಚಾರ ಚರ್ಚೆ ಮಾಡುವುದು ಸೂಕ್ತವಲ್ಲ
ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಹೇಳುವ ಮುನ್ನ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿರುವುದು ಎಷ್ಟು ಸರಿ?
ನಿಮ್ಮ ಪ್ರಶ್ನೆಗಳಲ್ಲೇ ಉತ್ತರವಿದೆ. ತಿರುಗಿಸಿ ಕೇಳಿದರೂ ನಾನಂತೂ ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಬಲಿಯಾಗುವುದಿಲ್ಲ
ಈ ಹಿಂದೆ ನನ್ನ ಬಳಿ ಆಯ್ಕೆ ಇಲ್ಲ ಎಂದು ಹೇಳಿದ್ದಿರಿ, ಈಗಲೂ ನೀವು ಅದೇ ಸ್ಥಿತಿಯಲ್ಲಿದ್ದೀರಾ?
ನಿಮಗೆ ನನ್ನ ವಿಚಾರದಲ್ಲಿ ಯಾಕೆ ಗಾಬರಿ? ಈ ವಿಚಾರದಲ್ಲಿ ನನಗಂತೂ ಗಾಬರಿಯಿಲ್ಲ
2028ರ ಚುನಾವಣೆಗೂ ನನ್ನದೇ ನಾಯಕತ್ವ ಎಂಬ ಸಿದ್ದರಾಮಯ್ಯ ಹೇಳಿದ್ದಾರಲ್ಲ?
ಅದು ಅವರ ವೈಯಕ್ತಿಕ ಹೇಳಿಕೆ. ಹೇಳುವ ಸಂಪೂರ್ಣ ಅಧಿಕಾರ ಅವರಿಗಿದೆ. ಪಕ್ಷದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ನನ್ನ ಜವಾಬ್ದಾರಿ. ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಯುವುದು ನನ್ನ ಗುರಿ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆಯೇ?
ನಾನು ಪಕ್ಷದ ಅಧ್ಯಕ್ಷನಾಗಿ ಈಗಷ್ಟೇ ಪಕ್ಷದ ಬಾವುಟ ನೀಡಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇನೆ
ನಿಮ್ಮ ಆಸೆ ಈಡೇರುವವರೆಗೂ ನೀವು ಇದೇ ಸಹನೆ, ನಿಷ್ಠೆ ಉಳಿಸಿಕೊಳ್ಳುತ್ತೀರಾ?
ಪಕ್ಷ ಇದ್ದರೆ ನಾನು. ಪಕ್ಷ ಇಲ್ಲವೆಂದರೆ ನಾನಿಲ್ಲ
‘ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಸುಪ್ರೀಂನಿಂದಲೇ (ಹೈಕಮಾಂಡ್) ತೀರ್ಪು ಬಂದಿದೆ. 2028ರ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದಿದ್ದರೂ ಅವರದೇ ನಾಯಕತ್ವ ಇರುತ್ತದೆ. 2028ಕ್ಕೆ ನಾನೂ ಸಿ.ಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಮುಖ್ಯಮಂತ್ರಿ ಕುರ್ಚಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ವಿದ್ಯೆ ಮತ್ತು ತಂತ್ರಗಾರಿಕೆ ಡಿ.ಕೆ.ಶಿವಕುಮಾರ್‌ಗೆ ಚೆನ್ನಾಗಿ ಗೊತ್ತಿದೆ. ಅವರು ಸೂಕ್ತ ಸಮಯ ನೋಡಿಕೊಂಡು, ಅವನ್ನು ಪ್ರಯೋಗಿಸುತ್ತಾರೆ. ಅಗ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಬೇಕಾಗುತ್ತದೆ’ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ. ಇತರರು ಮುಖ್ಯಮಂತ್ರಿ ಆಗಲು ನೆರವು ನೀಡಿದವರಿಗೆ, ತಾವೇ ಆ ಹುದ್ದೆ ಪಡೆದುಕೊಳ್ಳುವುದು ಹೇಗೆ ಎಂಬುದು ಗೊತ್ತಿರುವುದಿಲ್ಲವೇ’ ಎಂದರು.
ನವದೆಹಲಿ: ‘ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್‌ನಲ್ಲಿ ಯಾವುದೇ ಚರ್ಚೆ ಆಗಿಲ್ಲ. ಈ ಬಗ್ಗೆ ನಿಮಗೆ ಎಷ್ಟೊಂದು ಸಲ ವಿವರಣೆ ನೀಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡುಕಿದರು.
ಕೇಂದ್ರ ಸಚಿವರು ಹಾಗೂ ಹೈಕಮಾಂಡ್ ನಾಯಕರ ಭೇಟಿಗಾಗಿ ಬಂದಿದ್ದ ಅವರು ಬೆಂಗಳೂರಿಗೆ ಹಿಂತಿರುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದರು.
‘ನಿಗಮ ಮಂಡಳಿಗಳಿಗೆ ನೇಮಕ ಸಂಬಂಧ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಈ ಚರ್ಚೆ ಅಪೂರ್ಣ ಆಗಿದೆ. ಇದೇ 16ರಂದು ಸುರ್ಜೇವಾಲಾ ಬೆಂಗಳೂರಿಗೆ ಬರಲಿದ್ದಾರೆ. ಅಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿಗೆ ಅಂತಿಮ ರೂಪ ನೀಡಲಾಗುವುದು’ ಎಂದರು.
ನವದೆಹಲಿ: ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ ಬೆನ್ನಲ್ಲೇ, ಆಪ್ತ ಸಚಿವರು ಹಾಗೂ ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೆಳಗಿಳಿಸಲು ಮತ್ತೊಂದು ಸುತ್ತಿನ ಪ್ರಯತ್ನ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಹಾಗೂ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಸಚಿವರು ಹಾಗೂ ಶಾಸಕರು ಈ ಬೇಡಿಕೆ ಮುಂದಿರಿಸಿದ್ದಾರೆ. ಖರ್ಗೆ ಅವರನ್ನು ಗುರುವಾರ ರಾತ್ರಿ ಇಲ್ಲಿ ಭೇಟಿ ಮಾಡಿದ್ದ ಸಿದ್ದರಾಮಯ್ಯ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದು ಸೂಕ್ತ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಶಿವಕುಮಾರ್ ಐದು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯ ವರೆಗೆ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹೈಕಮಾಂಡ್ ಈ ಹಿಂದೆ ಹೇಳಿತ್ತು. ಆದರೆ, ಚುನಾವಣೆ ಮುಗಿದು ಒಂದು ವರ್ಷ ಕಳೆದರೂ ಬದಲಾವಣೆ ಆಗಿಲ್ಲ. ಜತೆಗೆ, ಇದು ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನೀತಿಗೆ ವಿರುದ್ಧ ಎಂದು ಸಿದ್ದರಾಮಯ್ಯ ಬಣದವರು ಖರ್ಗೆ ಗಮನಕ್ಕೆ ತಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಥವಾ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ನೇಮಿಸಬೇಕು ಎಂಬುದು ಸಿದ್ದರಾಮಯ್ಯ ಅವರ ಇರಾದೆ. ಸಚಿವ ಸ್ಥಾನ ಬಿಟ್ಟು ಅಧ್ಯಕ್ಷರಾಗಲು ಜಾರಕಿಹೊಳಿ ಸಿದ್ಧರಿದ್ದಾರೆ. ಅಧ್ಯಕ್ಷ ಸ್ಥಾನದ ಜತೆಗೆ ಕನಿಷ್ಠ ಒಂದು ವರ್ಷ ಸಚಿವ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಖಂಡ್ರೆ ಷರತ್ತು ಒಡ್ಡಿದ್ದಾರೆ. ಪರಮಾಪ್ತರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಮೂಲಕ ಶಿವಕುಮಾರ್ ಅವರನ್ನು ಮತ್ತಷ್ಟು ದುರ್ಬಲಗೊಳಿಸುವುದು ಮುಖ್ಯಮಂತ್ರಿ ಲೆಕ್ಕಾಚಾರ.
‘ಕಳೆದ ಕೆಲವು ಸಮಯದಿಂದ ಶಾಸಕರ ಅಹವಾಲುಗಳನ್ನು ಕೇಳುವುದಕ್ಕೆ ಶಿವಕುಮಾರ್ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಸಮಸ್ಯೆಗಳನ್ನು ಕೇಳುವ ನೆಪದಲ್ಲಿ ಸಿದ್ದರಾಮಯ್ಯ ಆಪ್ತ ಶಾಸಕರನ್ನು ತಮ್ಮ ಗುಂಪಿಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಕೆಲವು ಶಾಸಕರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಶಿವಕುಮಾರ್ ಈ ನಡೆಗೆ ತಕ್ಕ ತಿರುಗೇಟು ನೀಡಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ಸಿದ್ದರಾಮಯ್ಯ ಬಣ ಪ್ರಯತ್ನ ತೀವ್ರಗೊಳಿಸಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.