ADVERTISEMENT

ಹೆಬ್ಬಾಳಕರ ಸಂತೈಸಲು ಎಂಇಎಸ್ ನಿಷೇಧದ ಆಗ್ರಹಕ್ಕೆ ಡಿಕೆಶಿ ಹಿಂದೇಟು: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 5:59 IST
Last Updated 21 ಡಿಸೆಂಬರ್ 2021, 5:59 IST
ಅನಗೋಳದ ಕನಕದಾಸ ಕಾಲೊನಿಯಲ್ಲಿ ಮರುಪ್ರತಿಷ್ಠಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಂಗಳವಾರ ಪೂಜೆ ಸಲ್ಲಿಸಿದ ಸಚಿವ ಈಶ್ವರಪ್ಪ.
ಅನಗೋಳದ ಕನಕದಾಸ ಕಾಲೊನಿಯಲ್ಲಿ ಮರುಪ್ರತಿಷ್ಠಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಂಗಳವಾರ ಪೂಜೆ ಸಲ್ಲಿಸಿದ ಸಚಿವ ಈಶ್ವರಪ್ಪ.   

ಬೆಳಗಾವಿ: ಗಡಿಯಲ್ಲಿ ಪದೇ ಪದೇ ಪುಂಡಾಟ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯನ್ನು ನಿಷೇಧಿಸುವಂತೆ ಇಡೀ ರಾಜ್ಯದ ಜನರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ವ್ಯತಿರಿಕ್ತ ಹೇಳಿಕೆ ಕೊಡುತ್ತಿದ್ದಾರೆ. ಈ‌ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು.

ಇಲ್ಲಿನ ಅನಗೋಳದ ಕನಕದಾಸ ಕಾಲೊನಿಯಲ್ಲಿ ಮರುಪ್ರತಿಷ್ಠಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಂಗಳವಾರ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಬೆಂಬಲಿತರು ಬಹಳ ಮಂದಿ ಇದ್ದಾರೆ. ಹೀಗಾಗಿ, ಅವರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಸಂತೈಸಲು ಶಿವಕುಮಾರ್ ಹೇಳಿಕೆ‌ಗಳನ್ನು ನೀಡುತ್ತಿರಬಹುದು ಎಂದು ದೂರಿದರು.

ADVERTISEMENT

ಎಂಇಎಸ್ ಈಗ ಹೇಡಿತನದ ಸಮಿತಿಯಾಗಿದೆ. ಹಗಲಿನಲ್ಲಿ, ಮಹಾನ್ ನಾಯಕರಿಗೆ ಅವಮಾನಿಸುವ ಕೃತ್ಯವನ್ನು ಪುಂಡರು ಎಸಗಿದ್ದರೆ ಕನ್ನಡಿಗರು ಅವರನ್ನು ಛಿದ್ರಗೊಳಿಸುತ್ತಿದ್ದರು. ಆದರೆ, ಆ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಾರೆ ಎಂದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಘಟನೆ ವಿಚಾರವಾಗಿ ಎಲ್ಲ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದೇವೆ.ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಾಡಿದ್ದೇವೆ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗುವುದು ಎಂದರು.

ರಾಜ್ಯದಲ್ಲಿ ಶಾಂತಿ ಕದಡುವ ಸಲುವಾಗಿ ಎಂಇಎಸ್ ಪುಂಡರು ಕುಕೃತ್ಯ ಎಸಗಿದ್ದಾರೆ. ಮಹಾನ್ ನಾಯಕರ ಗೌರವಕ್ಕೆ ಚ್ಯುತಿ ತಂದವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ನಮ್ಮ ಮನೆಯಲ್ಲಿ ನಾವು ಯಾವುದೇ ಭಾಷೆ ಮಾತನಾಡಬಹುದು. ಆದರೆ, ಕರ್ನಾಟಕದಲ್ಲಿ ವಾಸಿಸುವವರೆಲ್ಲರೂ ಕನ್ನಡಿಗರೇ. ಪ್ರತಿಮೆಗಳಿಗೆ ಅವಮಾನ ಘಟನೆಯಿಂದ ಕನ್ನಡಿಗರಿಗೆ ಆಘಾತವಾಗಿದೆ. ಈ ದುಷ್ಕೃತ್ಯ ಎಸಗಿದವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಸರ್ಕಾರ ಪ್ರಯತ್ನ ನಡೆಸಿದೆ. ಈ ಘಟನೆ ಹಿಂದೆ ಯಾವುದಾದರೂ ರಾಜಕೀಯ ಪಕ್ಷದ ನಾಯಕರು ಅಥವಾ ಸಂಘ-ಸಂಸ್ಥೆ ಭಾಗಿಯಾಗಿದೆಯೇ ಎಂದು ತನಿಖೆ ನಡೆಸಿ ಕ್ರಮ‌ ಜರುಗಿಸಲಾಗುವುದು ಎಂದರು.

ಎಂಇಎಸ್ ನಿಷೇಧ ವಿಚಾರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯತಿರಿಕ್ತ ಹೇಳಿಕೆ‌ ನೀಡುತ್ತಿದ್ದಾರೆ. ಡಿಕೆಶಿ, ಒಬ್ಬ ಶಾಸಕರನ್ನು ಸಂತೈಸಲು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ನಾಡಿನ ಜನರ ಅಪೇಕ್ಷೆಯಂತೆ ಸುವರ್ಣ ವಿಧಾನಸೌಧದ ಎದುರು ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದರು.

ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಬೆಂಬಲಿತ ಐವರು ಶಾಸಕರಿದ್ದರು. ಈಗ ಅವರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಕ್ಷ ಸೋಲುಂಡಿರುವ ಕುರಿತು ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

'ಬೆಳಗಾವಿ ಗಲಾಟೆಗೆ ಎಂಇಎಸ್‌ನವರೇ ಕಾರಣ ಎನ್ನಲಾಗುವುದಿಲ್ಲ. ತನಿಖೆ ನಡೆದು ಸಾಬೀತಾಗಬೇಕು. ಯಾರೋ ನಾಲ್ಕು ಜನ ಗಲಾಟೆ ಮಾಡಿದರೆ ಅವರು ಎಂಇಎಸ್‌ನವರೇ ಎನ್ನುವುದಿಲ್ಲ' ಎಂದು ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.