ADVERTISEMENT

‘ಡಿ.ಕೆ.ಶಿವಕುಮಾರ್‌ ತೆರಿಗೆ ವಂಚನೆ ಅಪರಾಧಿಕ ಒಳಸಂಚು’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 20:23 IST
Last Updated 12 ಮಾರ್ಚ್ 2019, 20:23 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ), ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120–‘ಬಿ’ (ಅಪರಾಧಿಕ ಒಳಸಂಚು) ಅನುಸಾರ ದಾಖಲಿಸಿರುವ ದೂರು ಸರಿಯಾಗಿಯೇ ಇದೆ. ಇದರಲ್ಲಿ ಇನಿತೂ ಲೋಪವಿಲ್ಲ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹೈಕೋರ್ಟ್‌ಗೆ ತಿಳಿಸಿದರು.

‘₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಇ.ಡಿ ನೀಡಿರುವ ಸಮನ್ಸ್ ರದ್ದು ಕೋರಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಸಚಿನ್‌ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಎನ್‌.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಸಲ್ಲಿಸಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಿಚಾರಣೆ ವೇಳೆ ನಾವದಗಿ ಅವರು, ‘ಆರೋಪಿ ಶಿವಕುಮಾರ್, ಆದಾಯ ತೆರಿಗೆ ಕಾಯ್ದೆ–1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ತನಿಖೆಯ ವೇಳೆ ಇನ್ನಷ್ಟು ಅಪರಾಧಗಳು ಬೆಳಕಿಗೆ ಬರಬಹುದು’ ಎಂದು ವಿವರಿಸಿದರು.

ADVERTISEMENT

ಐದನೇ ಆರೋಪಿ ನವದೆಹಲಿಯ ಎನ್‌.ರಾಜೇಂದ್ರ ಪರ ವಾದ ಮಂಡಿಸಿದ ಎಂ.ಎಸ್‌.ಶ್ಯಾಮಸುಂದರ್‌, ‘ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ನೋಟಿಸ್‌ ಒಬ್ಬ ವ್ಯಕ್ತಿ ತನ್ನ ವಿರುದ್ಧವೇ ಸಾಕ್ಷಿ ಹೇಳುವಂತೆ ಬಲವಂತ ಮಾಡುವ ಹಾಗಿದೆ. ಇದು ಸಂವಿಧಾನದ 20 (3)ನೇ ವಿಧಿಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿದರು.

ವಿಚಾರಣೆಯನ್ನು ಬುಧವಾರಕ್ಕೆ (ಮಾ.13) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.