ADVERTISEMENT

ಮೇಕೆದಾಟು ಯೋಜನೆ ತಕ್ಷಣ ಆರಂಭಿಸಲಿ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:43 IST
Last Updated 12 ಜುಲೈ 2021, 19:43 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ತಕ್ಷಣ ಆರಂಭಿಸಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಸರ್ಕಾರದ ಜತೆಗೆ ನಿಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಈ ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ಅಲ್ಲಿನ ಎಲ್ಲ ಪಕ್ಷಗಳ ರಾಜಕೀಯ ಕಾರ್ಯಸೂಚಿಯಿದು. ನಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿ ನಾಯಕರು, ಕೇಂದ್ರದಲ್ಲಿರುವ ಅಧಿಕಾರ ಬಳಸಿ ಅಗತ್ಯ ಅನುಮತಿಗಳನ್ನು ಪಡೆಯಲಿ’ ಎಂದರು.

‘ನಾವು ಯೋಜನೆ ಮಾಡುತ್ತಿರುವವರು. ಹೀಗಾಗಿ, ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ಇಲ್ಲ. ತಮಿಳುನಾಡಿನವರು ಏನಾದರೂ ಮಾಡಿಕೊಳ್ಳಲಿ. ಯೋಜನೆ ಅನುಷ್ಠಾನಗೊಳಿಸಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಯೋಜನೆಗೆ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿಯೂ ಇದೆ’ ಎಂದರು.

ADVERTISEMENT

‘ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ. ಇದು ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ’ ಎಂದರು.

‘ರಾಜ್ಯ ಸರ್ಕಾರ ಯಾವ ವಿಚಾರದಲ್ಲೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಡಿಯೂರಪ್ಪ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದೇ ತಪ್ಪು. ಅದರ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.