ADVERTISEMENT

ಜಗದೀಶ್ವರಿ ಅಮ್ಮನವರ ದೇವಸ್ಥಾನಕ್ಕೆ ಡಿಕೆಶಿ: ಸಚಿವ, ಶಾಸಕರನ್ನು ಹೊರಗಿಟ್ಟು ಪೂಜೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 19:31 IST
Last Updated 19 ಡಿಸೆಂಬರ್ 2025, 19:31 IST
   

ಕಾರವಾರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ದೇವಾಲಯದ ಗರ್ಭಗುಡಿ ಪ್ರವೇಶಿಸಿ, ಬಾಗಿಲುಮುಚ್ಚಿ ಏಕಾಂಗಿಯಾಗಿ ಪೂಜೆ ಸಲ್ಲಿಸಿದರು.

ಅವರ ಜೊತೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಅವರು ಹೊರಗಡೆಯೇ ಉಳಿದರು. ಇನ್ನೊಂದು ತಿಂಗಳಲ್ಲಿ ದೇಗುಲಕ್ಕೆ ಮತ್ತೆ ಭೇಟಿ ನೀಡುವುದಾಗಿಯೂ ತಿಳಿಸಿದರು.

‘ಈಗ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆ. ಆಗಾಗ ಅತಿ ಗಣ್ಯರು ಬರುತ್ತಾರೆ. ಇಷ್ಟಾರ್ಥಗಳ ಬಗ್ಗೆ ಅಮ್ಮನವರ ಮೂರ್ತಿ ಎದುರು ನಿಂತು ಪ್ರಶ್ನೆ ಹಾಕುವುದು ವಾಡಿಕೆ. ಡಿ.ಕೆ.ಶಿವಕುಮಾರ್ ಕೂಡ ಇಷ್ಟಾರ್ಥ ಸಿದ್ಧಿಗೆ ಪ್ರಶ್ನೆ ಹಾಕಲು ಬಂದಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ADVERTISEMENT

ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ನಿಗದಿಯಂತೆ ಬೆಳಿಗ್ಗೆ 9 ಗಂಟೆಗೆ ಬರಬೇಕಿತ್ತು. ನಾಲ್ಕು ಗಂಟೆ ತಡವಾಗಿ ಬಂದರು. 

ತಿಂಗಳಲ್ಲಿ ಮತ್ತೆ ಭೇಟಿ –ಡಿಕೆಶಿ: ಜಗದೀಶ್ವರಿ ದೇವಿ ದರ್ಶನದ ಬಳಿಕ ಡಿ.ಕೆ.ಶಿವಕುಮಾರ್ ಅವರು ಮಾತನಾಡುತ್ತಾ, ‘ಐದು ವರ್ಷದ ಹಿಂದೆ ಇದೇ ಸ್ಥಳಕ್ಕೆ ಕುಟುಂಬದವರು ಬಂದು, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದ್ದರು. ಅದು ಈಡೇರಿದ ಬಳಿಕ ಬಂದು ಪೂಜೆ ಸಲ್ಲಿಸಿದ್ದೆ. ಈಗಲೂ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಲು ಬಂದಿದ್ದೇನೆ’ ಎಂದರು.

'ಜಗದೀಶ್ವರಿ ದೇವಿಸನ್ನಿಧಿಗೆ ಯಾರೇ ಬಂದು ಇಷ್ಟಾರ್ಥ ಸಿದ್ಧಿಗೆ ದೇವಿಗೆ ಅಲಂಕಾರ ಮಾಡಿಸಿ, ಪ್ರಶ್ನೆ ಕೇಳಿಸುತ್ತಾರೆ. ಕೋರಿಕೆ ಈಡೇರುವುದಿದ್ದರೆ ದೇವಿ ಐದು ರೂಪದಲ್ಲಿ ಪ್ರಸಾದ ನೀಡುತ್ತಾಳೆ. ಶಿವಕುಮಾರ್ ಅವರು ಹಲವು ಪ್ರಶ್ನೆ ಕೇಳಿದಾಗಲೂ ದೇವಿ ಪ್ರಸಾದ ಕರುಣಿಸಿದ್ದಾಳೆ' ಎಂದು ಅರ್ಚಕ ಗಣೇಶ ನಾಯ್ಕ ತಿಳಿಸಿದರು.

ಏನು ಕೋರಿಕೆ ಮುಂದಿಟ್ಟರು ಎಂಬುದನ್ನು ಅರ್ಚಕರು ತಿಳಿಸಲಿಲ್ಲ. ಆದರೆ, ‘ಪೂಜೆಯನ್ನು ಸಲ್ಲಿಸಿದ ಬಳಿಕ ಖುಷಿಯಲ್ಲಿದ್ದರು. ಇನ್ನೊಂದು ತಿಂಗಳಲ್ಲಿ ಪುನಃ ಪೂಜೆ ಸಲ್ಲಿಸಲು ಬರುವುದಾಗಿ ಹೇಳಿದರು' ಎಂದು ಹೇಳಿದರು.

ಆಂದ್ಲೆ ಗ್ರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಡಿ.ಕೆ.ಶಿವಕುಮಾರ್ ಅವರು ಗೋಕರ್ಣದ ಮಹಾಬಲೇಶ್ವರ, ಮಹಾಗಣಪತಿ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.