ADVERTISEMENT

ಕುಲಪತಿ ಹುದ್ದೆ ಮಾರಾಟಕ್ಕಿವೆ: ಡಿಕೆಶಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 21:04 IST
Last Updated 9 ನವೆಂಬರ್ 2020, 21:04 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್    

ಬೆಂಗಳೂರು: ‘ರಾಜ್ಯದಲ್ಲಿ ಕುಲಪತಿ ಹುದ್ದೆ ಮಾರಾಟಕ್ಕಿಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಭ್ರಷ್ಟಾಚಾರವೇ ಪ್ರೊ. ಅಶೋಕ್ ಕುಮಾರ್ ಆತ್ಮಹತ್ಯೆಗೆ ಕಾರಣ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನನಗೆ ಗೊತ್ತಿರುವ ಮಾಹಿತಿಯಂತೆ ನಾಲ್ಕು ಮಂದಿಯ ಹೆಸರು ಕುಲಪತಿ ಹುದ್ದೆಗೆ ಕೇಳಿಬಂದಿತ್ತು. ನೇಮಕ ವಿಚಾರದಲ್ಲಿ ಸಾಕಷ್ಟು ಪೈಪೋಟಿ, ವ್ಯಾಪಾರ ನಡೆದಿದೆ’ ಎಂದು ಹೇಳಿದರು.

‘ಅಶೋಕ್‌ ಕುಮಾರ್‌ ಬಡ್ಡಿಗೆ ಹಣ ತಂದು ಕೊಟ್ಟರೂ ಅವರನ್ನು ನೇಮಕ ಮಾಡಲಿಲ್ಲ. ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್ ಬರದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ’ ಎಂದರು.

ADVERTISEMENT

‘ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಣವನ್ನು ಯಾವ ಅಧಿಕಾರಿ, ಮಂತ್ರಿ, ಮಧ್ಯವರ್ತಿ ತೆಗೆದುಕೊಂಡಿದ್ದಾರೊ ಆ ಎಲ್ಲ ವಿಷಯಗಳ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.