ADVERTISEMENT

ಡಿಕೆಶಿ ಮನೆ ದೇವರ ಮಾತು ಕೇಳಿ ಒಂದೇ ಕಡೆ ಸ್ಪರ್ಧಿಸಲಿ: ಮುನಿರತ್ನ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 9:47 IST
Last Updated 13 ಜನವರಿ 2023, 9:47 IST
   

ಕೋಲಾರ: ‘ಮುಸ್ಲಿಮರ ಸುಮಾರು 40 ಸಾವಿರ ವೋಟುಗಳಿದ್ದು, ಗೆಲ್ಲಿಸುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ನಡೆಯಲಿದ್ದು, ಕಾಂಗ್ರೆಸ್‌ ಲೆಕ್ಕಕ್ಕೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿ.ಕೆ.ಶಿವಕುಮಾರ್‌ ಮನೆ ದೇವರ ಪ್ರಕಾರ ಸಿದ್ದರಾಮಯ್ಯ ಒಂದು ಕಡೆ ನಿಂತರೆ ಮಾತ್ರ ಗೆಲ್ಲುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಮನೆ ದೇವರು ಎರಡು ಕಡೆ ನಿಂತುಕೊಳ್ಳಬೇಕೆಂದು ಹೇಳುತ್ತಿದೆ. ಶಿವಕುಮಾರ್ ಅವರ ಮನೆ ದೇವರ ಮಾತು ಕೇಳಿ ಕೋಲಾರ ಕ್ಷೇತ್ರ ಬಿಟ್ಟರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಶಿವಕುಮಾರ್‌ ಅವರ ದೇವರು ಏನು ಮಾಡುತ್ತೋ ಗೊತ್ತಿಲ್ಲ’ ಎಂದರು.

‘ಕೋಲಾರ ಶಾಸಕರು ಹಾಗೂ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸಿದ್ದರಾಮಯ್ಯ ಅವರ ದಾರಿ ತಪ್ಪಿಸುತ್ತಿದ್ದಾರೆ. ಹೇಗಾದರೂ ಮಾಡಿ ಸೋಲಿಸಬೇಕೆಂದು ಒಳಸಂಚು ರೂಪಿಸುತ್ತಿದ್ದಾರೆ. ಒಳ ಜಗಳದ ಸೂಕ್ಷ್ಮವನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ತಮ್ಮ ನಿಜವಾದ ಹಿತೈಷಿಗಳು ಯಾರೆಂಬುದು ಗೊತ್ತಾಗುತ್ತದೆ. ಜೊತೆಗೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸೋಲುವ ಭಯದಿಂದ ಅವರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಂಕ್ರಾಂತಿ ಮುಗಿದ ಬಳಿಕ ವರಿಷ್ಠರ ಜೊತೆ ಮಾತನಾಡಿ ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇವೆ’ ಎಂದರು.

ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಕಾಂಗ್ರೆಸ್‌ ಸೇರುತ್ತಿರುವ ಕುರಿತ ಪ್ರಶ್ನೆಗೆ, ‘ನಾಗೇಶ್‌ ನಮ್ಮ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸಿ ಗೆದ್ದವರಲ್ಲ. ಪಕ್ಷೇತರ ಶಾಸಕರಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಪಕ್ಷಕ್ಕೆ ಬೆಂಬಲ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿ ಮಾಡಿದ್ದೆವು, ಆಮೇಲೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೆವು. ಯಾವ ಉದ್ದೇಶದಿಂದ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.