ADVERTISEMENT

ಲಿಂಗಾಯತ ಸಚಿವರು, ಶಾಸಕರ ಜೊತೆ ಡಿಕೆಶಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 16:11 IST
Last Updated 13 ಫೆಬ್ರುವರಿ 2024, 16:11 IST
 ಡಿಕೆಶಿ
ಡಿಕೆಶಿ    

ಬೆಂಗಳೂರು: ವಿಧಾನಸಭೆಯ ಮಧ್ಯಾಹ್ನದ ಭೋಜನ ವಿರಾಮದ ವೇಳೆ, ತಮ್ಮ ಆಪ್ತ ಸಚಿವರು, ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರ ಜತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ ನಡೆಸಿದರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಧ್ಯಾಹ್ನ ಒಂದು ಗಂಟೆಗೆ ಕಲಾಪವನ್ನು ಮುಂದೂಡಿದರು. ಸಭಾಂಗಣದಲ್ಲೇ ಉಳಿದ ಶಿವಕುಮಾರ್‌, ಎರಡು ಗಂಟೆಯವರೆಗೆ ನಿರಂತರ ಸಮಾಲೋಚನೆ ನಡೆಸಿದರು.

ಸದನದಲ್ಲಿದ್ದ ಶಿವಕುಮಾರ್‌ ಅವರನ್ನು ಸಚಿವರು, ಶಾಸಕರು ಸುತ್ತುವರಿದು ಮಾತುಕತೆಯಲ್ಲಿ ತೊಡಗಿದರು. ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಆರ್‌.ವಿ. ದೇಶಪಾಂಡೆ, ಲಕ್ಷ್ಮಣ ಸವದಿ, ಯು.ಬಿ. ಬಣಕಾರ, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಮಹಾಂತೇಶ ಕೌಜಲಗಿ ಸೇರಿದಂತೆ ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗದ ಶಾಸಕರು ಇದ್ದರು. ಶಿವಕುಮಾರ್ ಜತೆ ನಿಕಟವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕರ್ನಾಟಕದ ಯಾವುದೇ ಶಾಸಕರೂ ಈ ವೇಳೆ ಇರಲಿಲ್ಲ.

ADVERTISEMENT

ಏತನ್ಮಧ್ಯೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಸಭಾಂಗಣದೊಳಗೆ ಇಣುಕಿದರು. ಮಾತುಕತೆ ನಡೆಯುತ್ತಿದ್ದುದನ್ನು ನೋಡಿದ ಅವರು, ಮೊಗಸಾಲೆಗೆ ತೆರಳಿ ಅಲ್ಲಿಯೇ ಕುಳಿತರು.

ನಿಗಮ–ಮಂಡಳಿ ನೇಮಕದಲ್ಲಿ ಶಿವಕುಮಾರ್ ಮೇಲುಗೈ ಸಾಧಿಸಿರುವುದು, ಕೆಲವೇ ಕ್ಷೇತ್ರಗಳಿಗೆ ಜಲಸಂಪನ್ಮೂಲ ಇಲಾಖೆಯ ಅನುದಾನ ಹಂಚಿಕೆ ಮಾಡಿರುವುದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯೊಳಗೆ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.

ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಜಗದೀಶ ಶೆಟ್ಟರ್‌ ಅವರು ಬಿಜೆಪಿಗೆ ವಾಪಸಾಗಿರುವುದು, ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಶಾಸಕರಿಗೆ ಮುಖ್ಯಮಂತ್ರಿಯಿಂದ ವಿಶೇಷ ಅನುದಾನ, ಬುಧವಾರ  (ಫೆ. 14) ನಡೆಯಲಿರುವ ಶಾಸಕಾಂಗ ಪಕ್ಷದ ಸಭೆ, ಗ್ಯಾರಂಟಿ ಯೋಜನೆಗಳು, ಬಿಜೆಪಿಯ ಚುನಾವಣಾ ಕಾರ್ಯತಂತ್ರ ಮತ್ತಿತರ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಿತು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.