ADVERTISEMENT

ಮೀಸಲಾತಿ ಪಡೆಯದೆ ಮಠಕ್ಕೆ ಮರಳುವುದಿಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಸಿದ್ಧಗಂಗಾ ಮಠದಲ್ಲಿ ಪಂಚಮಸಾಲಿ ಸಮುದಾಯದ ಪಾದಯಾತ್ರಿಗಳ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 17:12 IST
Last Updated 12 ಫೆಬ್ರುವರಿ 2021, 17:12 IST
ತುಮಕೂರಿಗೆ ಬಂದ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾದಯಾತ್ರೆ
ತುಮಕೂರಿಗೆ ಬಂದ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾದಯಾತ್ರೆ   

ತುಮಕೂರು: ಪ್ರವರ್ಗ ‘2ಎ’ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಹಮ್ಮಿಕೊಂಡಿರುವ ಪಾದಯಾತ್ರೆಯು ಶುಕ್ರವಾರ ರಾತ್ರಿ ನಗರದ ಸಿದ್ಧಗಂಗಾ ಮಠ ತಲುಪಿದೆ.

ಪಾದಯಾತ್ರೆಯು 602 ಕಿ.ಮೀ ಕ್ರಮಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ವಿಶ್ವಾಸವಿಟ್ಟು ಪಾದಯಾತ್ರೆ ಮಾಡುತ್ತಿದ್ದೇವೆ. ಮೀಸಲಾತಿ ಪಡೆಯದ ಹೊರತು ನಾವು ಮಠಕ್ಕೆ ಮರಳುವುದಿಲ್ಲ. ಸಮುದಾಯದವರು ತಮ್ಮ ಊರುಗಳಿಗೆ ಮರಳುವುದಿಲ್ಲ. ಮುಂದಿನ ಹೆಜ್ಜೆ ಬಹಳ ಕಠಿಣವಾಗಲಿದೆ ಎಂದು ಪಾದಯಾತ್ರೆ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಫೆ. 21ರಂದು ಮೀಸಲಾತಿ ಹಕ್ಕೊತ್ತಾಯದ ಮಹಾರ‍್ಯಾಲಿ ನಡೆಯಲಿದೆ. ಅಂದು ಸಂಜೆ 4 ಗಂಟೆ ಒಳಗೆ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳದಿದ್ದರೆ ಅಂದು ಸಂಜೆಯಿಂದಲೇ ವಿಧಾನಸೌಧದ ಮುಂದೆ ಧರಣಿ ಮಾಡುತ್ತೇವೆ ಎಂದರು.

ADVERTISEMENT

ಕೇಂದ್ರ ಸರ್ಕಾರವು ವೀರಶೈವ– ಲಿಂಗಾಯತ ಸಮುದಾಯದವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಶನಿವಾರ (ಫೆ.13) ವೀರಶೈವ ಮಠಾಧೀಶರು ಹಕ್ಕೊತ್ತಾಯ ಸಭೆ ನಡೆಸುತ್ತಿದ್ದಾರೆ. ಈ ಸಭೆಯನ್ನು ಸ್ವಾಗತಿಸುತ್ತೇವೆ.ಆ ಮಠಗಳಿಗೂ ದವಸ ಧಾನ್ಯ ಕೊಡುವ ಕೆಲಸವನ್ನು ಪಂಚಮಸಾಲಿಗಳು ಮಾಡಿದ್ದಾರೆ ಎಂದರು.

ಜ. 9ರಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಿಸಿ ಅವರ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಿಸಿದ್ದೆವು. ಪಾದಯಾತ್ರೆ ಮೂಲಕ ಮಠದಲ್ಲಿ ವಾಸ್ತವ್ಯ ಹೂಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಸಮಾವೇಶ ನಡೆಸುವ ಜಾಗದ ಬಗ್ಗೆ ಮಹಾರ‍್ಯಾಲಿ ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.