ADVERTISEMENT

ಫೋನ್‌ ಟ್ಯಾಪಿಂಗ್: ಡಿಜಿಪಿಗೆ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ ದೂರು

ಐಜಿಪಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ದೂರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 12:25 IST
Last Updated 13 ಮಾರ್ಚ್ 2023, 12:25 IST
ಎಂ.ಬಿ ಪಾಟೀಲ
ಎಂ.ಬಿ ಪಾಟೀಲ   

ವಿಜಯಪುರ: ‘ನನ್ನ ಹಾಗೂ ನನ್ನ ಕುಟುಂಬ ಮತ್ತು ನನ್ನ ಆಪ್ತರ ಫೋನ್ ಕರೆಗಳ ವಿವರವನ್ನು ಕೆಲವರು ತೆಗೆಸಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು, ಆದ ಕಾರಣ ಯಾರಿಗೂ ನನ್ನ ಫೋನ್‌ ಕರೆಗಳ ವಿವರವನ್ನು(ಕಾಲ್‌ ಹಿಸ್ಟರಿ) ನೀಡಬಾರದು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು, ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ದೂರು ನೀಡಿದ್ದಾರೆ.

‘ರಾಜಕೀಯ ದುರುದ್ದೇಶದಿಂದ ಕೆಲವರು ವಿಜಯಪುರ ಜಿಲ್ಲೆ ಹೊರತು ಪಡಿಸಿ ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ನನ್ನ ಫೋನ್‌ ಕರೆಗಳ ವಿವರ (ಕಾಲ್ ಹಿಸ್ಟರಿ) ತೆಗೆಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘ನನ್ನ ಮೊಬೈಲ್ ಫೋನ್‌ ಕರೆಗಳ ಮಾಹಿತಿ ಜೊತೆಗೆ ನನ್ನ ಪತ್ನಿ ಆಶಾ ಪಾಟೀಲ, ಸಹೋದರ, ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ, ಪುತ್ರ ಬಸನಗೌಡ ಪಾಟೀಲ ಹಾಗೂ ಬಿಎಲ್‌ಡಿಇ ಸಂಸ್ಥೆಯ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಅವರ ಫೋನ್‌ ಕರೆಗಳ ವಿವರವನ್ನು ತೆಗೆಸುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಇದು ವೈಯಕ್ತಿಕ ಮಾಹಿತಿ ಕದಿಯುವ ಯತ್ನವಾಗಿದೆ. ಕಾರಣ ನಮ್ಮೆಲ್ಲರ ಫೋನ್‌ ಕರೆಗಳ ವಿವರವನ್ನು (ಕಾಲ್ ಹಿಸ್ಟರಿ) ಯಾರಿಗೂ ನೀಡಬಾರದು. ಒಂದು ವೇಳೆ ನೀಡಿದರೆ ಅದಕ್ಕೆ ಮೊಬೈಲ್‌ ಫೋನ್‌ ಕಂಪನಿ(ಏಜೆನ್ಸಿ) ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಹೊಣೆಯಾಗುತ್ತದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.