ADVERTISEMENT

ದೊಡ್ಡಬಳ್ಳಾಪುರಕ್ಕೆ ಮೆಟ್ರೊ: ತಜ್ಞರ ಸಮಿತಿಗೆ ಶಿಫಾರಸು– ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 21:01 IST
Last Updated 27 ಜನವರಿ 2026, 21:01 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಸಾಧ್ಯಾಸಾಧ್ಯತೆ ಕುರಿತು ವರದಿ ನೀಡಲು ಸಮಗ್ರ ಚಲನಶೀಲತೆ ಯೋಜನೆಯ (ಸಿಎಂಪಿ) ತಜ್ಞರ ಸಮಿತಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಧೀರಜ್‌ ಮುನಿರಾಜು ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರವಾಗಿ ಕೃಷ್ಣ ಬೈರೇಗೌಡ ಉತ್ತರಿಸಿದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೊ 2ಎ ಮತ್ತು 2ಬಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಅದು 2027ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಜೊತೆಗೆ, 3 ಮತ್ತು 3ಎ ಹಂತಕ್ಕೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಎರಡರಲ್ಲೂ ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಇಲ್ಲ’ ಎಂದರು.

ADVERTISEMENT

‘ಬೆಂಗಳೂರು ನಗರದಲ್ಲಿ ಮೆಟ್ರೊ ರೈಲು ಮಾರ್ಗ ಯೋಜಿಸಲು ಸಿಎಂಪಿ ಸಮಿತಿಯಿದ್ದು, ಅದು ಯಾವ ಮಾರ್ಗ ನಿರ್ಮಾಣ ಮಾಡಬೇಕು ಎಂದು ಯೋಜಿಸಲಿದೆ. ಆದರೂ, ಭವಿಷ್ಯದ ಮೆಟ್ರೊ ರೈಲು ವ್ಯವಸ್ಥೆ ಒದಗಿಸಲು ಯಲಹಂಕ- ರಾಜಾನುಕುಂಟೆ- ದೊಡ್ಡಬಳ್ಳಾಪುರ ಸೇರಿದಂತೆ 26 ಕಿ.ಮೀ ಮೆಟ್ರೊ ಕಾರಿಡಾರ್‌ ನಿರ್ಮಾಣಕ್ಕೆ ಈ ಹಿಂದೆ ತಾತ್ಕಾಲಿಕ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿತ್ತು. ಆದರೆ, ಅದನ್ನು ಮುಂದುವರಿಸಿರಲಿಲ್ಲ. ಇದೀಗ ಪ್ರಸ್ತಾವವನ್ನು, ಸಿಎಂಪಿ ತಜ್ಞರ ಸಮಿತಿಗೆ ಶಿಫಾರಸು ಮಾಡಲಾಗುವುದು’ ಎಂದರು

‘ರಸ್ತೆ ಅಗಲ 45 ಮೀಟರ್‌ಗೆ ಇಳಿಕೆ’

ಬೆಂಗಳೂರು: ‘ನಗರದ ಮಧುರೆಯಿಂದ ರಾಜಾನುಕುಂಟೆ ಮಾರ್ಗವಾಗಿ ದೇವನಹಳ್ಳಿ ರಸ್ತೆವರೆಗೆ ನಿರ್ಮಿಸಲಾಗುತ್ತಿರುವ 21.38 ಕಿಮೀ ರಸ್ತೆಯ ಅಗಲವನ್ನು 90 ಮೀಟರ್‌ನಿಂದ 45 ಮೀಟರ್‌ಗೆ ಇಳಿಸಲು ಹೊಸದಾಗಿ ಆದೇಶ ಹೊರಡಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಎಸ್‌.ಆರ್‌. ವಿಶ್ವನಾಥ್‌ ಕೇಳಿದ ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪರವಾಗಿ ಕೃಷ್ಣ ಬೈರೇಗೌಡ ಉತ್ತರಿಸಿದರು. ‘ಮಧುರೆಯಿಂದ ರಾಜಾನುಕುಂಟೆ ಮಾರ್ಗವಾಗಿ ದೇವನಹಳ್ಳಿ
ರಸ್ತೆವರೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ (ಕೆಆರ್‌ಡಿಸಿಎಲ್‌) 21.38 ಕಿಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆ ಕಾಮಗಾರಿಯಲ್ಲಿ ಈಗಾಗಲೇ 8.04 ಕಿಮೀ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ.ಇನ್ನು 13.34 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡಬೇಕಿದ್ದು, ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ರಸ್ತೆಯ ಅಗಲ ಕಡಿಮೆ ಮಾಡಲು ಆದೇಶ ಹೊರಡಿಸಲಾಗುವುದು’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.