ADVERTISEMENT

ಮನೆಗೆಲಸ ಕಾರ್ಮಿಕರಿಗಾಗಿ ಮಾರ್ಗಸೂಚಿ ಮಾರ್ಪಾಡು: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 20:27 IST
Last Updated 1 ಜುಲೈ 2021, 20:27 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮನೆಗೆಲಸ ಕಾರ್ಮಿಕರು ಕೋವಿಡ್ ಲಾಕ್‌ಡೌನ್ ಪರಿಹಾರ ₹2 ಸಾವಿರ ಪಡೆಯಲು ನೊಂದಾಯಿಸಿಕೊಳ್ಳಲು ಸುಲಭ ಆಗುವಂತೆ ಮಾರ್ಗಸೂಚಿ ಮಾರ್ಪಡಿಸಲಾಗುವುದು ಎಂದು ಹೈಕೋರ್ಟ್‌ಗೆ ಕಾರ್ಮಿಕ ಇಲಾಖೆ ತಿಳಿಸಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ₹150 ರಿಂದ ₹250 ತನಕ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್ಎ) ವರದಿ ಸಲ್ಲಿಸಿತ್ತು.

ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಕಾರ್ಮಿಕ ಇಲಾಖೆ ಕಾರ್ಯದರ್ಶಿ, ‘ಕಮಿಷನ್ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರ ಸಲ್ಲಿಸಿದರು.

ADVERTISEMENT

‘ಕಾರ್ಮಿಕ ಇಲಾಖೆ ಪಟ್ಟಿ ಮಾಡಿರುವ ದಾಖಲೆಗಳನ್ನು ಒದಗಿಸುವುದು ಮನೆ ಕೆಲಸ ಕಾರ್ಮಿಕರಿಗೆ ಕಷ್ಟವಾಗಲಿದೆ. ಉದ್ಯೋಗದಾತರಿಂದ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಮಾತ್ರ ಪಡೆದು ಪರಿಹಾರ ನೀಡಲು ಸಾಧ್ಯವೇ’ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಮೌಖಿಕವಾಗಿ ಪ್ರಶ್ನಿಸಿತು.

ಮಾರ್ಪಡಿಸಿದ ಮಾರ್ಗಸೂಚಿ ಮತ್ತು ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.